ಬೆಂಗಳೂರು: ಸ್ಥಳೀಯರ ಪ್ರತಿಭಟನೆಯಿಂದ ಯಲಹಂಕ ಹೊರವಲಯದ ಮಾವಳ್ಳಿಪುರದಲ್ಲಿ ಕಸ ವಿಲೇವಾರಿ ಮಾಡುವುದನ್ನು ಬಿಬಿಎಂಪಿ ಸ್ಥಗಿತಗೊಳಿಸಿದ ಬೆನ್ನಲ್ಲಿಯೇ ಇದೀಗ ದೊಡ್ಡಬಳ್ಳಾಪುರ ರಸ್ತೆ ಬಳಿ ಟೆರ‌್ರಾ ಫಿರ್ಮಾ ಬಯೋಟೆಕ್ನಾಲಜೀಸ್ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ಜಾಗದಲ್ಲಿಯೂ ಕಸ ಸುರಿಯುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಮೂರ‌್ನಾಲ್ಕು ದಿನಗಳಿಂದ ನಗರದಲ್ಲಿ ಸಮರ್ಪಕ ಕಸ ವಿಲೇವಾರಿಯಾಗದೆ ಎಲ್ಲೆಂದರಲ್ಲಿ ಕಸದ ರಾಶಿ ಎದ್ದು ಕಾಣುತ್ತಿದೆ.
ಮಾವಳ್ಳಿಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆ ಅನುಭವಿಸುತ್ತಿರುವ ರೀತಿಯಲ್ಲೇ ನಾವು ಕೂಡ ಆರೋಗ್ಯ ಸಮಸ್ಯೆ ಎದುರಿಸಬಹುದು ಎಂಬ ಆತಂಕದಿಂದ ಸ್ಥಳೀಯರು ಟೆರ‌್ರಾ ಫಿರ್ಮಾ ಬಯೋಟೆಕ್ನಾಲಜೀಸ್ ಸಂಸ್ಥೆಯು ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಜಾಗದಲ್ಲಿಯೂ ಪ್ರತಿಭಟನೆ ನಡೆಸಿದ ನಂತರ ಪಾಲಿಕೆಯು ಅಲ್ಲಿ ಕಸ ಸುರಿಯುವುದಕ್ಕೆ ಅಡ್ಡಿಯಾಗಿದೆ.
ಮಾವಳ್ಳಿಪುರದಲ್ಲಿ ಕಸ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಿದ ನಂತರ ಟೆರ‌್ರಾಫಿರ್ಮಾ ಬಯೋಟೆಕ್ನಾಲಜೀಸ್ ನಿರ್ವಹಿಸುತ್ತಿರುವ ಜಾಗದಲ್ಲಿ 800 ಟನ್‌ಗಳಷ್ಟು ಕಸ ಸುರಿಯಲಾಗುತ್ತಿತ್ತು.
ಆದರೆ, ಅಲ್ಲಿಯೂ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ಸದ್ಯಕ್ಕೆ 300 ಟನ್ ಕಸ ವಿಲೇವಾರಿ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಜಾಗ ಕಲುಷಿತಗೊಳ್ಳದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದರೂ ರೈತರು ಒಪ್ಪುತ್ತಿಲ್ಲ.
ನಾಲ್ಕು ದಿನಗಳ ಹಿಂದೆ ರೈತರು ರಸ್ತೆ ತಡೆ ನಡೆಸಿ ಕಸದ ಲಾರಿಗಳನ್ನೂ ತಡೆದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಪರಿಣಾಮ, ಅಲ್ಲಿ ವಿಲೇವಾರಿಯಾಗುತ್ತಿದ್ದ ಕಸವನ್ನು ಇದೀಗ ಹೊಸಕೋಟೆ ಸಮೀಪದ ಮಂಡೂರು ಹಾಗೂ ರಾಜರಾಜೇಶ್ವರಿನಗರ ಬಳಿ ಸುರಿಯಲಾಗುತ್ತಿದೆ.
ನಗರದ ಅನೇಕ ಬಡಾವಣೆಗಳಲ್ಲಿ ಮಂಗಳವಾರ ತ್ಯಾಜ್ಯವು ಸಮರ್ಪಕ ವಿಲೇವಾರಿಯಾಗದೆ ಕಸ ರಾಶಿ ರಾಶಿ ಕಂಡು ಬಂದಿತು. ರಂಜಾನ್ ಹಬ್ಬದ ದಿನದಂದು ಕೂಡ ಕಸ ತೆಗೆಯಲು ಸಾಧ್ಯವಾಗಿಲ್ಲ. ಇದರಿಂದ ಕೆಲವು ಕಡೆ ಕಸ ಕೊಳೆತು ಗಬ್ಬುನಾರುತ್ತಿದೆ.
ಬಿಬಿಎಂಪಿ ಅಧಿಕಾರಿಗಳು ಅಸಹಾಯಕ: ಈ ನಡುವೆ, ಪ್ರತಿಭಟನೆ ಇದೇ ರೀತಿ ಮುಂದುವರಿದಲ್ಲಿ ಪಾಲಿಕೆಗೆ ಕಸ ವಿಲೇವಾರಿ ಮಾಡುವುದು ಕಷ್ಟವಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಪೊಲೀಸರ ನೆರವಿನೊಂದಿಗೆ ಪಾಲಿಕೆಯು ಕಸ ವಿಲೇವಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ, ಬಿಬಿಎಂಪಿಯು ಪರಿಸರ ಸ್ನೇಹಿ ಮಾದರಿಯಲ್ಲಿ ಕಸ ವಿಲೇವಾರಿ ಮಾಡುವ ಯೋಜನೆ ಕುರಿತು ಪಾಲಿಕೆ ಆಯುಕ್ತ ಎಂ.ಕೆ. ಶಂಕಲಿಂಗೇಗೌಡ ಅವರನ್ನು ಪ್ರಶ್ನಿಸಿದಾಗ, `ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವಂತಹ ಹಲವು ಪ್ರಸ್ತಾವನೆಗಳು ಮಂಜೂರಾತಿಗಾಗಿ ಹಣಕಾಸು ಇಲಾಖೆ ಮುಂದಿವೆ. ಇವುಗಳಿಗೆ ಅನುಮೋದನೆ ಸಿಕ್ಕರೂ ಕಾರ್ಯಾರಂಭಕ್ಕೆ 20ರಿಂದ 24 ತಿಂಗಳು ಕಾಲಾವಕಾಶ ಬೇಕಾಗುತ್ತದೆ~ ಎಂದರು.
ಕಸದ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಮೇಯರ್ ಡಿ. ವೆಂಕಟೇಶಮೂರ್ತಿ, `ಟೆರ‌್ರಾ ಫಿರ್ಮಾ ಜಾಗದಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ಎದುರಾಗಿರುವ ಸಮಸ್ಯೆಯನ್ನು ನಿವಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ~ ಎಂದರು.
ಬಿಎಂಟಿಎಫ್, ಬಿಬಿಎಂಪಿ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದನ್ನು ವಿರೋಧಿಸಿ ಪಾಲಿಕೆ ನೌಕರರು ಈ ತಿಂಗಳ 8ರಿಂದ ಮೂರು ದಿನ ಮುಷ್ಕರ ನಡೆಸಿದ ಸಂದರ್ಭದಲ್ಲಿಯೂ ನಗರದಲ್ಲಿ ಕಸ ವಿಲೇವಾರಿಯಾಗದೆ ತೀವ್ರ ಸಮಸ್ಯೆ ತಲೆದೋರಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.