ADVERTISEMENT

ರೈತರ ಸಾಲ ಮನ್ನಾಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಬೆಂಗಳೂರು: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ಹೊಸದಾಗಿ ಸಾಲ ನೀಡಬೇಕು. ಅಲ್ಲದೆ ಗಂಭೀರವಾಗಿ ಕಾಡುತ್ತಿರುವ ಬರಗಾಲ, ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚಿಸಲು ಕೂಡಲೇ ವಿಧಾನ ಮಂಡಲದ ಅಧಿವೇಶನ ಕರೆಯಬೇಕು ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕಿ ಮೋಟಮ್ಮ ಬುಧವಾರ ಇಲ್ಲಿ ಒತ್ತಾಯಿಸಿದರು.

ಬರಗಾಲದಿಂದಾಗಿ ಪ್ರತಿ ಜಿಲ್ಲೆಯಲ್ಲಿ 200ರಿಂದ 300 ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ. ಸಾಲ ವಸೂಲಾತಿ ಮುಂದೂಡುವುದರಿಂದ ಪ್ರಯೋಜನವಿಲ್ಲ. ರೈತರ ಬೇಡಿಕೆಯಂತೆ ಸಾಲ ಮನ್ನಾ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಸರ್ಕಾರ ಬರಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡಿದ್ದು ಬಿಟ್ಟರೆ ಬರ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ಅವರು ಟೀಕಿಸಿದರು.

ತೆಲಂಗಾಣ ಹೋರಾಟದಿಂದಾಗಿ ಸೆಪ್ಟೆಂಬರ್‌ನಲ್ಲಿ ಸಿಂಗರೇಣಿಯಿಂದ ಕಲ್ಲಿದ್ದಲು ಪೂರೈಕೆ ಪ್ರಮಾಣ ಕಡಿಮೆಯಾಗಿದ್ದರೂ, ಮಹಾರಾಷ್ಟ್ರದ ವೆಸ್ಟರ್ನ್ ಕೋಲ್‌ಫೀಲ್ಡ್ಸ್‌ನಿಂದ ಆ ಕೊರತೆಯನ್ನು ತುಂಬಲಾಗಿದೆ. ಜುಲೈನಲ್ಲಿ 1,81,500 ಲಕ್ಷ ಟನ್ ಬದಲು 2,84,930 ಟನ್, ಆಗಸ್ಟ್‌ನಲ್ಲಿ 1.81 ಲಕ್ಷ ಟನ್ ಬದಲು 2.97 ಲಕ್ಷ ಟನ್ ಹಾಗೂ ಸೆಪ್ಟೆಂಬರ್‌ನಲ್ಲಿ 1.75 ಲಕ್ಷ ಟನ್ ಬದಲು 2.18 ಲಕ್ಷ ಟನ್ ಕಲ್ಲಿದ್ದಲು ವೆಸ್ಟರ್ನ್ ಕೋಲ್‌ಫೀಲ್ಡ್ಸ್‌ನಿಂದ ಬಂದಿದೆ. ಆದರೂ ಕಲ್ಲಿದ್ದಲು ಪೂರೈಸಿಲ್ಲ ಎಂಬುದಾಗಿ ಕೇಂದ್ರವನ್ನು ದೂರುವುದು ಸರಿಯಲ್ಲ ಎಂದರು.

`ಅಧಿವೇಶನ ಕರೆಯಿರಿ ಎಂದರೆ ಸದಾನಂದ ಗೌಡ ನಮಗೇ ಪಾಠ ಹೇಳುತ್ತಾರೆ. ಪ್ರತಿಪಕ್ಷಗಳು ಕ್ಷುಲ್ಲಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದಿರುವುದು ಸರಿಯಲ್ಲ. ಸದನದಲ್ಲಿ ಪ್ರಸ್ತಾಪಿಸುವ ವಿಷಯಗಳಿಗೆ ಸರ್ಕಾರ ಸ್ಪಂದಿಸದಿದ್ದಾಗ ಧರಣಿ, ಸಭಾತ್ಯಾಗ ಮಾಡಬೇಕಾಗುತ್ತದೆ. ಸರ್ಕಾರ ನಡೆಸುವವರೆಗೆ ಹೆಚ್ಚು ಜವಾಬ್ದಾರಿ ಇರಬೇಕು. ಬೇಕಾದಾಗ ಕರೆಯುತ್ತೇವೆ ಎಂದು ಉದ್ಧಟತನದಿಂದ ಮಾತನಾಡುವುದು ಸರಿಯಲ್ಲ~ ಎಂದರು.

23 ದಿನ ಸಂಸತ್ ಅಧಿವೇಶನ ಬಹಿಷ್ಕರಿಸಿದ್ದ ಬಿಜೆಪಿ ನಮಗೆ ಪಾಠ ಮಾಡುವ ಅಗತ್ಯವಿಲ್ಲ. ವರ್ಷಕ್ಕೆ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು. ಈ ವರ್ಷ 22 ದಿನ ಮಾತ್ರ ನಡೆದಿದ್ದು, ಉಳಿದ ದಿನಗಳ ಅಧಿವೇಶನ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.