ಬೆಂಗಳೂರು: ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ವ್ಯಕ್ತಿಯನ್ನು ನೋಡುತ್ತಾ ನಿಂತಿದ್ದ ಯುವಕನಿಗೆ ಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ದೀಪಾಂಜಲಿನಗರದ ಸಮೀಪ ಸೋಮವಾರ ಬೆಳಿಗ್ಗೆ ನಡೆದಿದೆ.
ದೀಪಾಂಜಲಿನಗರ ನಿವಾಸಿ ಹರೀಶ್ (25) ಮತ್ತು ಚಿಕ್ಕಬಳ್ಳಾಪುರದ ನರಸಿಂಹರೆಡ್ಡಿ (28) ಮೃತಪಟ್ಟವರು. ಕುಡಿಯುವ ನೀರಿನ ವ್ಯಾಪಾರಿಯಾಗಿದ್ದ ಹರೀಶ್ ಅವರು ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಅವರ ಕೈಗಳು ತುಂಡಾಗಿದ್ದವು ಮತ್ತು ತಲೆಗೆ ತೀವ್ರ ಗಾಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂಬುದು ಖಚಿತವಾಗಿಲ್ಲ. ಶವ ಬಿದ್ದಿರುವ ಸ್ಥಳ ನೋಡಿದರೆ ಇದೊಂದು ಆತ್ಮಹತ್ಯೆ ಎನಿಸುತ್ತದೆ ಎಂದು ಪೊಲೀಸರು ಶಂಕಿಸಿದ್ದಾರೆ.ನೋಡಲು ಹೋಗಿ ಸಾವನ್ನಪ್ಪಿದ: ಹಳಿಯ ಸಮೀಪ ಬಿದ್ದಿದ್ದ ಹರೀಶ್ ಅವರ ಶವವನ್ನು ನೋಡಲು ಸಾರ್ವಜನಿಕರು ಗುಂಪುಗೂಡಿದ್ದರು.
11 ಗಂಟೆ ಸುಮಾರಿಗೆ ಆ ಸ್ಥಳಕ್ಕೆ ಬಂದ ನರಸಿಂಹರೆಡ್ಡಿ ಹಳಿಯ ಮೇಲೆ ನಿಂತು ಶವ ನೋಡುತ್ತಿದ್ದರು. ಆ ಸಂದರ್ಭದಲ್ಲಿ ಬಂದ ಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಅವರಿಗೆ ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.
ನರಸಿಂಹರೆಡ್ಡಿ ಅವರು ಮೊಬೈಲ್‌ನ ಹೆಡ್‌ಫೋನ್ ಅನ್ನು ಕಿವಿಗೆ ಹಾಕಿಕೊಂಡಿದ್ದರು. ದುರ್ಘಟನೆ ನಡೆದ ಸಂದರ್ಭದಲ್ಲಿ ಅವರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಹರೀಶ್ ಮತ್ತು ನರಸಿಂಹರೆಡ್ಡಿ ಇಬ್ಬರೂ ಅವಿವಾಹಿತರಾಗಿ್ದದರು ಎಂದು ಪೊಲೀಸರು ತಿಳಿಸಿದ್ದಾರೆ.ಎಸ್‌ಐ ಸುಬ್ಬಣ್ಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.