ADVERTISEMENT

ರೈಲ್ವೆ ಬಜೆಟ್: ಸಿಹಿಗಿಂತ ಕಹಿಯೆ ಹೆಚ್ಚು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:50 IST
Last Updated 14 ಮಾರ್ಚ್ 2012, 19:50 IST

ಬೆಂಗಳೂರು: ಕೆಂದ್ರ ಸರ್ಕಾರ ಬುಧವಾರ ಮಂಡಿಸಿದ ರೈಲ್ವೇ ಬಜೆಟ್‌ಗೆ ಸಂಬಂಧಿಸಿದಂತೆ ನಗರದ ಜನತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪ್ರಯಾಣ ದರ ಹೆಚ್ಚಳವಾಗಿದ್ದು, ರಾಜ್ಯಕ್ಕೆ ಹೆಚ್ಚಿನ ಹೊಸ ರೈಲುಗಳು ಸೇರ್ಪಡೆಯಾಗಲಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಈ ಬಾರಿಯ ರೈಲ್ವೇ ಬಜೆಟ್ ತೃಪ್ತಿ ತಂದಿದೆ ಎಂದಿದ್ದಾರೆ.

`ಬಸ್ಸಿನಲ್ಲಿ ಪ್ರಯಾಣ ದರ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಜನ ರೈಲು ಪ್ರಯಾಣ ಮಾಡುತ್ತಾರೆ. ಈಗ ರೈಲು ಪ್ರಯಾಣ ದರವೂ ಹೆಚ್ಚಾಗಿದೆ ಹಾಗೂ ಫ್ಲಾಟ್‌ಫಾರಂ ಟಿಕೆಟ್ ದರವನ್ನು ಮೂರು ರೂಪಾಯಿಯಿಂದ ಐದು ರೂಪಾಯಿಗೆ ಹೆಚ್ಚಿಸಿರುವುದರಿಂದ ಜನ ಸಾಮಾನ್ಯರಿಗೆ ಪರ್ಯಾಯ ವ್ಯವಸ್ಥೆಯಿಲ್ಲದಂತಾಗಿದೆ~.
-ಮಂಜುನಾಥ್, ಆಟೊ ಚಾಲಕ, ಬಸವೇಶ್ವರ ನಗರ ನಿವಾಸಿ

`ರಾಜ್ಯಕ್ಕೆ 24 ಹೊಸ ರೈಲುಗಳನ್ನು ಪರಿಚಯಿಸುವ ನಿರೀಕ್ಷೆಯಿತ್ತು. ಆದರೆ ಮೂರು ಪ್ಯಾಸೆಂಜರ್ ರೈಲು ಹಾಗೂ ಏಳು ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಕೇವಲ 10 ರೈಲುಗಳನ್ನು ಮಾತ್ರ ನೀಡುವ ಮೂಲಕ ಪ್ರತಿ ಬಾರಿಯಂತೆ ನಮ್ಮ ರಾಜ್ಯಕ್ಕೆ ಮತ್ತೆ ಅನ್ಯಾಯ ಮಾಡಲಾಗಿದೆ. ಹೆಚ್ಚಿನ ಜನರು ಪ್ರಯಾಣಕ್ಕೆ ರೈಲು ಸೇವೆಯನ್ನೇ ಅವಲಂಭಿಸಿರುವುದರಿಂದ ಹೆಚ್ಚಿನ ರೈಲುಗಳ ಅಗತ್ಯವಿತ್ತು~.
-ರಾಮ್‌ಕುಮಾರ್, ವಿಲ್ಸನ್ ಗಾರ್ಡನ್ ನಿವಾಸಿ 

ADVERTISEMENT

`ಇತ್ತೀಚಿನ ದಿನಗಳಲ್ಲಿ ರೈಲು ಅಪಘಾತಗಳು ಹೆಚ್ಚುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ರೈಲ್ವೇ ಸುರಕ್ಷತಾ ಕೆಂದ್ರವನ್ನು ಆರಂಭಿಸಲು ಈ ಬಾರಿಯ ಬಜೆಟ್‌ನಲ್ಲಿ ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ. ಹಾಗೆಯೇ ರಾಜ್ಯದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಶೌಚಾಲಯ ವ್ಯವಸ್ಥೆ ಸೇರಿದಂತೆ ಇತರೆ ಸೌಕರ್ಯಗಳನ್ನು ಕಲ್ಪಿಸಲು ಹಾಗೂ ನಿಲ್ದಾಣಗಳ ಸ್ವಚ್ಛತೆಗೆ ಹೆಚ್ಚಿನ ಅನುದಾನ ನೀಡಬೇಕಿತ್ತು~.
-ಬ್ಯಾಪಿ ಬ್ಯಾನರ್ಜಿ, ಮಡಿವಾಳ ನಿವಾಸಿ

`ನನ್ನದು ಮೂಲತಃ ಆಂದ್ರಪ್ರದೇಶ. ಇಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೊಮ್ಮೆ ಊರಿಗೆ ಹೋಗಿ ಬರುತ್ತೇನೆ. ಈ ಮೊದಲು ಸ್ಲೀಪರ್ ಕೋಚ್ ರೈಲಿನಲ್ಲಿ 193 ರೂಪಾಯಿ ದರ ನಿಗದಿಯಾಗಿತ್ತು. ಈ ಬಾರಿಯ ರೈಲ್ವೇ ಬಜೆಟ್‌ನಲ್ಲಿ ಸ್ಲೀಪರ್ ಕೋಚ್ ಪ್ರಯಾಣಕ್ಕೆ ದರ ಹೆಚ್ಚಳ ಮಾಡಿರುವುದರಿಂದ ತೊಂದರೆಯಾಗಲಿದೆ~
-ಹೇಮಾ, ಯಲಹಂಕ ನಿವಾಸಿ


`ಈ ಬಾರಿಯ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸ ರೈಲು ಮಾರ್ಗಗಳ ಪ್ರಸ್ತಾವನೆ ಇಲ್ಲ. ರೈಲುಗಳ ವೇಗ ಹೆಚ್ಚಳಕ್ಕಿಂತಲೂ ಸ್ಥಳೀಯ ಪ್ರಯಾಣಿಕರ ಬಗ್ಗೆಯೂ ಯೋಚಿಸಬೇಕಿತ್ತು. ಜನ ಸಾಮನ್ಯರಿಗೆ ಈ ಬಜೆಟ್‌ನಿಂದ ಯಾವುದೇ ಪ್ರಯೋಜನವಿಲ್ಲ~
-ನಾಗೇಶ್, ಖಾಸಗಿ ಕಂಪೆನಿ ಉದ್ಯೋಗಿ

`ಈ ಬಾರಿಯ ಬಜೆಟ್‌ನಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿರುವುದರಲ್ಲಿ ತಪ್ಪಿಲ್ಲ ಎಂಬುದು ನನ್ನ ಅಭಿಪ್ರಾಯ. ರೈಲ್ವೆ ಇಲಾಖೆಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ದೃಷ್ಠಿಯಿಂದ ಬಡ ಜನರ ಮೇಲೆ ಒತ್ತಡ ಹೇರದಂತೆ ಸರ್ಕಾರ ಯೋಚಿಸಿ ನಿರ್ಧಾರ ತೆಗೆದುಕೊಂಡಿದೆ. ಪ್ರತಿ ಕಿ.ಮೀಗೆ ಎರಡು ಪೈಸೆ ಹೆಚ್ಚಳ ಮಾಡಿರುವುದರಿಂದ ಜನರಿಗೆ ಹೆಚ್ಚಿನ ಹೊರೆ ಎನಿಸುವುದಿಲ್ಲ. ಪ್ರಯಾಣಿಕರು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಹೋಗುವುದಾದರೆ ಈಗಿನ ಪರಿಷ್ಕೃತ ದರ ಸೇರಿ 70 ರೂಪಾಯಿ ಆಗುತ್ತದೆ. ಆದರೆ ಬಸ್ಸಿನಲ್ಲಿ 210 ರೂಪಾಯಿ ಬೇಕು~.
-ಎ.ವಿ.ಸತ್ಯನಾರಾಯಣ್, ಮೈಸೂರು ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ


`ಈ ಬಾರಿಯ ಬಜೆಟ್‌ನಲ್ಲಿ ಒಂದು ಲಕ್ಷ ಜನರಿಗೆ ರೈಲ್ವೇ ಇಲಾಖೆಯಲ್ಲಿ ಉದ್ಯೋಗ ನೀಡುವುದಾಗಿ ಪ್ರಸ್ತಾಪಿಸಲಾಗಿದೆ. ನಿರುದ್ಯೋಗದ ಸಮಸ್ಯೆಯನ್ನು ನೀಗಿಸಲು ಇದೊಂದು ಸಣ್ಣ ಪ್ರಯತ್ನ. ಆದರೆ ನಮ್ಮದು ಮಂಗಳೂರು ಸಮೀಪದ ಬೈಂದೂರು, ಅಲ್ಲಿಗೆ ಸಮರ್ಪಕವಾದ ರೈಲು ಸಂಚಾರ ವ್ಯವಸ್ಥೆಯಾಗಬೇಕಿತ್ತು~.
-ಆಸೀಫ್, ಹಲಸೂರು ನಿವಾಸಿ

`ಹಬ್ಬ ಹಾಗೂ ವಾರಾಂತ್ಯದ ದಿನಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ವೃದ್ಧರು, ಅಂಗವಿಕಲರು ಪ್ರಯಾಣ ಬೆಳೆಸುವಾಗ ಪರದಾಡಬೇಕಾಗುತ್ತದೆ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರೈಲುಗಳಲ್ಲೂ ಅಂಗವಿಕಲರಿಗಾಗಿ ಪ್ರತ್ಯೇಕ ಬೋಗಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮಗೆ ಹೆಚ್ಚಿನ ಅನುದಾನ ದೊರೆಯಲಿಲ್ಲ~.
-ಕೃಷ್ಣ, ಆಟೊ ಚಾಲಕ, ಸಂಪಂಗಿ ರಾಮನಗರ

`ರೈಲ್ವೇ ಇಲಾಖೆಯಿಂದ ಸರ್ಕಾರಕ್ಕೆ ಹೇಳಿಕೊಳ್ಳುವ ಆದಾಯ ಬರುತ್ತಿಲ್ಲ. ಕಳೆದ ಹತ್ತು ವರ್ಷದ ಹಿಂದೆಯೇ ದರ ಹೆಚ್ಚಳ ಮಾಡಬೇಕಿತ್ತು. ಕೋಲಾರದಲ್ಲಿ ಕೋಚ್ ಫ್ಯಾಕ್ಟರಿ ಆರಂಭಿಸಲು ಸರ್ಕಾರ ನಿರ್ಧಾರ ಮಾಡಿದೆ. ಇದರಿಂದ ಉದ್ಯೋಗಾವಕಾಶಗಳು ದೊರೆತಂತಾಗಿದೆ. ಜನರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಈ ಬಾರಿ ಮಂಡಿಸಲಾಗಿದ್ದು, ನನಗೆ ಸಂಪೂರ್ಣ ತೃಪ್ತಿ ತಂದಿದೆ~.
-ಎಸ್.ವಿ. ಅನಂತ್, ನಿವೃತ್ತ ಎಚ್‌ಎಂಟಿ ಉದ್ಯೋಗಿ

`ದರ ಹೆಚ್ಚಳ ಇಲ್ಲಿ ಪ್ರಶ್ನೆಯಲ್ಲ. ಪ್ರಯಾಣಿಕರು ಹೆಚ್ಚಿನ ದರ ನೀಡಲು ತಯಾರಿದ್ದಾರೆ. ಅದಕ್ಕೆ ತಕ್ಕಂತೆ ಅನುಕೂಲಗಳನ್ನು ಬಯಸುತ್ತಾರೆ. ರೈಲು ನಿಲ್ದಾಣ ಹಾಗೂ ರೈಲ್ವೇ ವೇಳಾಪಟ್ಟಿಯನ್ನು ಗಮನಿಸಿದರೆ ಸಮಸ್ಯೆಗಳು ಅರ್ಥವಾಗುತ್ತವೆ. ದ್ವಿತಿಯ ದರ್ಜೆಯ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ರೈಲಿನಲ್ಲಿ ನಿಂತುಕೊಳ್ಳಲು ಸಹ ಜಾಗವಿರುವುದಿಲ್ಲ~.
-ಸಜ್ಜನ್‌ರಾಜ್ ಮೇಹ್ತಾ, ಎಫ್‌ಕೆಸಿಸಿಐನ ರಾಜ್ಯ ತೆರಿಗೆ ಸಮಿತಿ ಸದಸ್ಯ

`ರೈಲ್ವೆ ಬಜೆಟ್‌ನಲ್ಲಿ ಪ್ರಯಾಣ ದರ ಹೆಚ್ಚಳ ಮಾಡದಿದ್ದರೆ ರೈಲ್ವೇ ಇಲಾಖೆಯನ್ನು ಖಾಸಗಿಯವರಿಗೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇಲಾಖೆಯಿಂದ ಸರ್ಕಾರಕ್ಕೆ ಯಾವುದೇ ಆದಾಯವಿರಲಿಲ್ಲ~
-ಪ್ರಸಾದ್, ಎಚ್‌ಡಿಎಫ್‌ಸಿ ಬ್ಯಾಂಕ್ ಸಿಬ್ಬಂದಿ

`ಪ್ರಯಾಣದ ಅವಧಿಯನ್ನು ಮಿತಗೊಳಿಸುವ ಹಿನ್ನೆಲೆಯಲ್ಲಿ ರೈಲಿನ ವೇಗವನ್ನು ಹೆಚ್ಚಿಸಲು ಸರ್ಕಾರ ಚಿಂತಿಸಿದೆ. ಇದರಿಂದ ಸಹಜವಾಗಿಯೇ ಗ್ರಾಮೀಣ ಪ್ರದೇಶಗಳಲ್ಲಿ ರೈಲು ನಿಲುಗಡೆ ಇಲ್ಲದಂತಾಗುತ್ತದೆ. ಗ್ರಾಮೀಣ ಜನತೆಗೆ ರೈಲು ಸೇವೆ ಲಭ್ಯವಾಗುವುದು ಕಷ್ಟಸಾಧ್ಯ~.
-ಶಿವರಾಂ, ಬಸವೇಶ್ವರ ನಗರ

`ರೈಲ್ವೆ ನಿಲ್ದಾಣಗಳಲ್ಲಿ 30 ರಿಂದ 40 ರೂಪಾಯಿಗಳನ್ನು ಪಡೆದು ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಇನ್ನೂ ರೈಲಿನಲ್ಲಿ ಶೌಚಾಲಯ ವ್ಯವಸ್ಥೆ ಹೇಗಿದೆ ಎಂದು ಪ್ರಯಾಣ ಮಾಡುವವರಿಗೆಲ್ಲಾ ಗೊತ್ತಿದೆ. ಇಂತಹ ಸೌಲಭ್ಯಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡಬೇಕಿತ್ತು~. 
-ರಾಮಕೃಷ್ಣ ಬಾಬು, ರಾಜಾಜಿನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.