ADVERTISEMENT

ಲಂಚ ಪ್ರಕರಣ: ಪ್ರತಿಕೂಲ ಸಾಕ್ಷ್ಯ ನುಡಿದ ಮೀನಾ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಇಬ್ಬರು ನೌಕರರ ವಿರುದ್ಧದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಹಿಂದಿನ ಆಯುಕ್ತ (ಈಗ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ) ಭರತ್‌ಲಾಲ್ ಮೀನಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ಪ್ರತಿಕೂಲ ಸಾಕ್ಷ್ಯ ನುಡಿದಿದ್ದಾರೆ.

ಜಾಹೀರಾತು ಫಲಕ ಅಳವಡಿಕೆಗೆ ಅನುಮತಿ ನೀಡಲು ಎಂ.ರವೀಂದ್ರ ಎಂಬುವರಿಂದ 8,000 ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಪಾಲಿಕೆಯ ತೆರಿಗೆ ಮೌಲ್ಯಮಾಪಕ ಯತಿರಾಜ್ ಮತ್ತು ದ್ವಿತೀಯ ದರ್ಜೆ ಸಹಾಯಕ ಅಂಥೋಣಿ ರಾಜ್ ಎಂಬುವರನ್ನು ಲೋಕಾಯುಕ್ತ ಪೊಲೀಸರು 2009ರಲ್ಲಿ ಬಂಧಿಸಿದ್ದರು.

ಆಗ ಪಾಲಿಕೆ ಆಯುಕ್ತರಾಗಿದ್ದ ಮೀನಾ ಅವರು ಆರೋಪಿಗಳ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 19ರ ಅಡಿ ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡಿದ್ದರು.

ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿಯುವಂತೆ ಮೀನಾ ಅವರಿಗೆ ಸೂಚಿಸಲಾಗಿತ್ತು.

ನ್ಯಾಯಾಲಯಕ್ಕೆ ಹಾಜರಾದ ಅವರು, `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ ಮತ್ತು `ಭ್ರಷ್ಟಾಚಾರದ ವಿರುದ್ಧ ಕಾಯ್ದೆ~ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಿದ್ದೆ~ ಎಂದು ತಿಳಿಸಿದರು (ಇಂತಹ ಕಾಯ್ದೆಗಳೇ ಇಲ್ಲ).

`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 7 ಮತ್ತು ಕಲಂ 13 (1)(ಇ) ಕುರಿತು ನಿಮಗೇನು ಗೊತ್ತು~ ಎಂದು ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು ಪ್ರಶ್ನಿಸಿದರು. `ಈ ಕಲಮುಗಳ ಅಡಿಯಲ್ಲೇ ನಾನು ಲೋಕಾಯುಕ್ತ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಿದ್ದೇನೆ~ ಎಂದು ಮೀನಾ ಉತ್ತರಿಸಿದರು.

ನಂತರ ಅಧಿಕಾರಿಯನ್ನು ಪಾಟಿಸವಾಲಿಗೆ ಒಳಪಡಿಸಲು ಲೋಕಾಯುಕ್ತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅವರಿಗೆ ನ್ಯಾಯಾಲಯ ಅವಕಾಶ ನೀಡಿತು. `ನೀವು ಉಲ್ಲೇಖಿಸಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಮುಗಳು ಶಿಕ್ಷೆಗೆ ಸಂಬಂಧಿಸಿದವು~ ಎಂದು ಎಸ್‌ಪಿಪಿ ಹೇಳಿದರು. ತಮ್ಮ ನಿಲುವಿಗೆ ಅಂಟಿಕೊಂಡ ಮೀನಾ, ಅವು ದಂಡನೆಯ ಪ್ರಮಾಣವನ್ನೂ ವಿವರಿಸುತ್ತವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.