ADVERTISEMENT

ಲಕ್ಷ್ಮಿನಾರಾಯಣ, ಅನಿತಾ ಅಮಾನತು ರದ್ದು

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಬೆಂಗಳೂರು: ಅಧಿಕೃತವಾಗಿ ಜಾಮೀನು ಸಿಗದಿದ್ದರೂ ಕುಖ್ಯಾತ ಕ್ರಿಮಿನಲ್ ಒಬ್ಬನನ್ನು ಬಿಡುಗಡೆಗೊಳಿಸಿರುವ ಆರೋಪದ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿದ್ದ ಟಿ.ಎಚ್.ಲಕ್ಷ್ಮಿನಾರಾಯಣ ಹಾಗೂ ಸಹಾಯಕ ಅಧೀಕ್ಷಕಿಯಾಗಿದ್ದ ಡಾ.ಅನಿತಾ ಅವರನ್ನು ಅಮಾನತು ಮಾಡಿರುವ ಸರ್ಕಾರದ ಆದೇಶವನ್ನು ಹೈಕೋರ್ಟ್ ಸೋಮವಾರ ವಜಾಮಾಡಿದೆ.

2011ರ ಡಿಸೆಂಬರ್‌ನಲ್ಲಿ ಕೇಂದ್ರ ಕಾರಾಗೃಹದಲ್ಲಿ ಇದ್ದ ಕುಖ್ಯಾತ ಕ್ರಿಮಿನಲ್ ಸೈಯದ್ ಮಸೂದ್ ಎಂಬಾತನನ್ನು ಕಾನೂನು ಬಾಹಿರವಾಗಿ ಬಿಡುಗಡೆಗೊಳಿಸಿರುವ ಆರೋಪದ ಮೇಲೆ ಇವರಿಬ್ಬರನ್ನು ಅಮಾನತು ಮಾಡಿ  ಏ.24ರಂದು ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಕೂಡ ಎತ್ತಿಹಿಡಿದಿತ್ತು. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಕಾನೂನುಬಾಹಿರವಾಗಿ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ ಎಂದು ಸರ್ಕಾರವನ್ನು ನ್ಯಾಯಮೂರ್ತಿ ಎನ್.ಕುಮಾರ್ ನೇತೃತ್ವದ ವಿಭಾಗೀಯ ಪೀಠ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಲಕ್ಷ್ಮಿನಾರಾಯಣ ಅವರ ಕುರಿತಾಗಿ ಆದೇಶದಲ್ಲಿ ಈ ರೀತಿಯಾಗಿ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ: `40 ವರ್ಷಗಳ ಕಾಲ ಕಪ್ಪುಚುಕ್ಕೆ ಇಲ್ಲದೆ ಕರ್ತವ್ಯ ನಿರ್ವಹಿಸಿರುವ ವ್ಯಕ್ತಿಯನ್ನು ಅವರ ನಿವೃತ್ತಿಯ ಅಂಚಿನಲ್ಲಿ (ಬರುವ ನ.30ರಂದು ನಿವೃತ್ತರಾಗಲಿದ್ದಾರೆ) ಸರ್ಕಾರ ನಡೆಸಿಕೊಂಡಿರುವ ಪರಿ ಗಮನಿಸಿದರೆ ಅಚ್ಚರಿಯಾಗುತ್ತದೆ. ನಮಗೆ ನೀಡಿರುವ ದಾಖಲೆಗಳನ್ನು ಪರಿಶೀಲಿಸಿದರೆ, ಈ ಅಮಾನತು ಆದೇಶದ ಹಿಂದೆ ದುರುದ್ದೇಶ ಅಡಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

`ಇವರ ಜಾಗಕ್ಕೆ ಜೈಲಿನ ಅಧೀಕ್ಷಕ ಎಲ್. ಲಿಂಗರಾಜು ಅವರನ್ನು ತರಲು ಲಕ್ಷ್ಮಿನಾರಾಯಣ ಅವರನ್ನು ನಿಯಮಬಾಹಿರವಾಗಿ ಬಳ್ಳಾರಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೆ ಸೂಕ್ತ ಕಾರಣಗಳನ್ನೂ ನೀಡಿಲ್ಲ. ನಿವೃತ್ತಿ ಸಮೀಪಿಸಿದಾಗ ನೌಕರನನ್ನು ಬೇರೆಡೆ ವರ್ಗಾವಣೆ ಮಾಡಬಾರದು.
 
ಆ ಸಂದರ್ಭದಲ್ಲಿ ಯಾವ ಸ್ಥಳದಲ್ಲಿ ಆತ ಕರ್ತವ್ಯ ನಿರ್ವಹಿಸುತ್ತಿರುತ್ತಾನೆಯೋ, ಅದೇ ಸ್ಥಳದಲ್ಲಿಯೇ ನಿವೃತ್ತಿಗೊಳಿಸಬೇಕು ಎನ್ನುವುದು ನಿಯಮ. ಈ ಪ್ರಕರಣದಲ್ಲಿ ಹಾಗಾಗಿಲ್ಲ. ಆದುದರಿಂದ ವರ್ಗಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಎಟಿ, ಸರ್ಕಾರದ ಆದೇಶಕ್ಕೆ ತಡೆ ನೀಡಿತು. 

`ಸರ್ಕಾರದ ವಿರುದ್ಧ ಕೆಎಟಿ ನೀಡಿರುವ ಈ ಆದೇಶದ ಪ್ರತಿ ಲಕ್ಷ್ಮಿನಾರಾಯಣ ಅವರ ಕೈಸೇರುವ ಮುಂಚೆಯೇ, ಯಾವುದೋ ಒಂದು ನೆಪವೊಡ್ಡಿ ಎಲ್ಲ ನಿಯಮ, ಕಾನೂನುಗಳನ್ನು ಗಾಳಿಗೆ ತೂರಿ ಅವರನ್ನು ಅಮಾನತುಗೊಳಿಸಿರುವುದು ನೋಡಿದರೆ ಸರ್ಕಾರದ ಉದ್ದೇಶ ಏನು ಎಂಬುದು ತಿಳಿಯುತ್ತದೆ.  ಮಸೂದನನ್ನು ಕಾನೂನು ಬಾಹಿರವಾಗಿಯೇ ಬಿಡುಗಡೆಗೊಳಿಸಲಾಗಿದೆ ಎಂಬ ಬಗ್ಗೆ ದಾಖಲೆ ನೀಡಲೂ ಸರ್ಕಾರ ವಿಫಲವಾಗಿದೆ. ಇಂತಹ ಕ್ರಮವನ್ನು ಕೋರ್ಟ್ ಎಂದಿಗೂ ಸಹಿಸುವುದಿಲ್ಲ~.

ಬಲಿಪಶುವಾದ ಅನಿತಾ: ಡಾ.ಅನಿತಾ ಅವರ ಅಮಾನತು ಆದೇಶವನ್ನು ಕೂಡ ರದ್ದು ಮಾಡಿರುವ ನ್ಯಾಯಮೂರ್ತಿಗಳು `ಇವರು ಕೂಡ ಲಕ್ಷ್ಮಿನಾರಾಯಣ ಅವರ ಜೊತೆ ಬಲಿಪಶುವಾಗಿದ್ದಾರೆ. ಸೇವಾ ಹಿರಿತನದ ಪಟ್ಟಿಯಲ್ಲಿ ಅನಿತಾ ಮೂರನೆಯ ಸ್ಥಾನದಲ್ಲಿದ್ದಾರೆ. ಅವರಿಗೆ ಬಡ್ತಿ ಇನ್ನೇನು ದೊರಕುವ ಹಂತದಲ್ಲಿದೆ. ವಿಚಿತ್ರ ಎಂದರೆ ಕ್ಷುಲ್ಲಕ ಕಾರಣಕ್ಕೆ ಅವರನ್ನೂ ಅಮಾನತು ಮಾಡಲಾಗಿದೆ~ ಎಂದಿದ್ದಾರೆ.

ಇವರಿಬ್ಬರ ವಿರುದ್ಧ ನಡೆಯುತ್ತಿರುವ ತನಿಖೆಯನ್ನು ಮುಂದುವರಿಸಲು ನ್ಯಾಯಮೂರ್ತಿಗಳು ಸರ್ಕಾರಕ್ಕೆ ಅನುಮತಿ ನೀಡಿದ್ದಾರೆ. ತಾವು ಆದೇಶದಲ್ಲಿ ಉಲ್ಲೇಖಿಸಿರುವ ಯಾವುದೇ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ತನಿಖೆ ಮುಂದುವರಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದೂ ಅವರು ತಿಳಿಸಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ತಡೆ: ಉತ್ತರಹಳ್ಳಿ ಹೋಬಳಿಯ ಹೊಸಕೆರೆಹಳ್ಳಿಯಲ್ಲಿರುವ ರಾಜಕಾಲುವೆ ಒತ್ತುವರಿ ಮಾಡಿರುವ ಆರೋಪ ಹೊತ್ತ `ಸ್ಕೈಲೈನ್ ಕನ್‌ಸ್ಟ್ರಕ್ಷನ್ ಅಂಡ್ ಹೌಸಿಂಗ್ ಲಿಮಿಟೆಡ್ ಕಂಪೆನಿ~ಯು ಆ ಸ್ಥಳದಲ್ಲಿ ಯಾವುದೇ ನಿರ್ಮಾಣ ಕಾರ್ಯವನ್ನು ಮುಂದುವರಿಸದಂತೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಕಾನೂನುಬಾಹಿರವಾಗಿ ಇಲ್ಲಿ ಕಟ್ಟಡ ನಿರ್ಮಾಣ ಆಗುತ್ತಿದೆ ಎಂದು ದೂರಿ ಆರ್.ರಮೇಶ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಈ ಆದೇಶ ಹೊರಡಿಸಿದ್ದಾರೆ. ಕಂಪೆನಿಯು ಬಿಬಿಎಂಪಿ ಅಧಿಕಾರಿಗಳ ಜೊತೆ ಶಾಮೀಲು ಆಗಿ ಒತ್ತುವರಿ ಮಾಡಿಕೊಂಡಿದೆ. ಆದುದರಿಂದ ತಾವು ದೂರು ಸಲ್ಲಿಸಿದರೂ ಪ್ರಯೋಜನ ಆಗುತ್ತಿಲ್ಲ ಎನ್ನುವುದು ಅರ್ಜಿದಾರರ ವಾದ. ವಿಚಾರಣೆ ಮುಂದೂಡಲಾಗಿದೆ.
 

ಮಾನಹಾನಿ: ದೇವೇಗೌಡರಿಗೆ ನೋಟಿಸ್
ಮಾನಹಾನಿ ಮೊಕದ್ದಮೆ ಒಂದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ಸಿವಿಲ್ ಕೋರ್ಟ್ ಸೋಮವಾರ ತುರ್ತು ನೋಟಿಸ್ ಜಾರಿಗೆ ಆದೇಶಿಸಿದೆ.

ಇವರ ವಿರುದ್ಧ `ನೈಸ್~ ಸಂಸ್ಥೆಯ ಮುಖ್ಯಸ್ಥ ಅಶೋಕ ಖೇಣಿ ದಾಖಲು ಮಾಡಿರುವ ಮೊಕದ್ದಮೆ ಇದಾಗಿದೆ. ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ರಸ್ತೆಗೆ ಸಂಬಂಧಿಸಿದಂತೆ ಖೇಣಿ ಅವರ ವಿರುದ್ಧ ದೇವೇಗೌಡರು ಮಾನಹಾನಿ ಹೇಳಿಕೆ ನೀಡಿದ್ದಾರೆ ಎನ್ನುವುದು ಆರೋಪ.
 
ಇದರಿಂದ ತಮ್ಮ ಘನತೆಗೆ ಕುಂದು ಬಂದಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಹತ್ತು ಕೋಟಿ ರೂಪಾಯಿ ಪರಿಹಾರ ನೀಡಲು ದೇವೇಗೌಡರಿಗೆ ಆದೇಶಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ವಿಚಾರಣೆಯನ್ನು 21ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT