ADVERTISEMENT

ಲಾಲ್‌ಬಾಗ್‌: ದ್ರಾಕ್ಷಿ, ಕಲ್ಲಂಗಡಿ ಮೇಳಕ್ಕೆ ಚಾಲನೆ

ಹಾಪ್‌ಕಾಮ್ಸ್‌ ಮಳಿಗೆಗಳಲ್ಲೂ ಶೇಕಡ 10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:45 IST
Last Updated 23 ಫೆಬ್ರುವರಿ 2018, 19:45 IST
ವಿದ್ಯಾರ್ಥಿನಿಯರು ವಿವಿಧ ತಳಿಯ ದ್ರಾಕ್ಷಿ ಹಣ್ಣುಗಳನ್ನು ನೋಡಿದರು
ವಿದ್ಯಾರ್ಥಿನಿಯರು ವಿವಿಧ ತಳಿಯ ದ್ರಾಕ್ಷಿ ಹಣ್ಣುಗಳನ್ನು ನೋಡಿದರು   

ಬೆಂಗಳೂರು: ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಹಾಪ್‌ಕಾಮ್ಸ್ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ದ್ರಾಕ್ಷಿ, ಕಲ್ಲಂಗಡಿ ಹಾಗೂ ಅಪರೂಪದ ಹಣ್ಣುಗಳ ಮಾರಾಟ ಮೇಳಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಚಾಲನೆ ನೀಡಿದರು.

‘ಹಾಪ್‌ಕಾಮ್ಸ್‌ ಕೃಷಿ ಉತ್ಪನ್ನಗಳನ್ನು ನೇರವಾಗಿ ಖರೀದಿಸುವುದರಿಂದ ರೈತರಿಗೆ ಹೆಚ್ಚು ಉಪಯೋಗವಾಗುತ್ತದೆ. ಇವುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದರಿಂದ ಗ್ರಾಹಕರಿಗೂ  ಹೊರೆ ಎನಿಸದು’ ಎಂದು ಸಚಿವರು ಅಭಿಪ್ರಾಯಪಟ್ಟರು.

‘ಗಾಜಿನಮನೆ ಬಳಿಯ ಮಳಿಗೆಗಳಲ್ಲಿ 3 ದಿನ ದ್ರಾಕ್ಷಿ, ಕಲ್ಲಂಗಡಿಯನ್ನು ಶೇ 10 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ನಮ್ಮ ಸಂಸ್ಥೆಯ ಎಲ್ಲಾ ಮಳಿಗೆಗಳಲ್ಲಿ ಒಂದು ತಿಂಗಳವರೆಗೆ ರಿಯಾಯಿತಿ ಮುಂದುವರಿಯಲಿದೆ’ ಎಂದು ಹಾಪ್‌ಕಾಮ್ಸ್‌ನ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ ತಿಳಿಸಿದರು.

ADVERTISEMENT

‘ಕಳೆದ ವರ್ಷ 295 ಟನ್‌ ದ್ರಾಕ್ಷಿ ಹಾಗೂ 1,336 ಟನ್‌ ಕಲ್ಲಂಗಡಿ ಮಾರಾಟವಾಗಿತ್ತು. ದ್ರಾಕ್ಷಿಯಿಂದ ₹ 2.61 ಕೋಟಿ, ಕಲ್ಲಂಗಡಿಯಿಂದ ₹2.21 ಕೋಟಿ ವಹಿವಾಟು ನಡೆದಿತ್ತು. ಈ ಬಾರಿ ವಹಿವಾಟು ಹೆಚ್ಚಿಸುವ ಉದ್ದೇಶ ಹೊಂದಿದ್ದೇವೆ’  ಎಂದರು.

ಉತ್ತರ ಕರ್ನಾಟಕ ಭಾಗದ ನೀಲಿ, ಸೋನಾಕ ಸೂಪರ್‌, ಕೃಷ್ಣ ಶರದ್‌, ಜಂಬೂ ಶರದ್‌, ಥಾಮಸ್‌ ಸೀಡ್‌ಲೆಸ್‌ ಸೇರಿದಂತೆ ವಿವಿಧ ತಳಿಯ ದ್ರಾಕ್ಷಿಗಳು ಹಾಗೂ ಕಿರಣ ಮತ್ತು ನಾಮಧಾರಿ ಕಲ್ಲಂಗಡಿಗಳು ಮಾರಾಟಕ್ಕಿವೆ. ರಸಬಾಳೆ, ನೇಂದ್ರ ಬಾಳೆ, ಚಂದ್ರಬಾಳೆ, ಸಕ್ಕರೆ ಬಾಳೆ, ರಾಮಫಲ, ಮುಳ್ಳು ರಾಮ್‌ಫಲ, ಚಕೋತಾ, ಸಿಟ್ರಾನ್‌, ಕಿನೋ ಮ್ಯಾಂಡ್ರಿನ್‌, ಕರ್ಬೂಜ ಹಣ್ಣುಗಳು ಹಾಗೂ ತರಕಾರಿ, ಸಿರಿಧಾನ್ಯಗಳೂ ಇಲ್ಲಿ ಲಭ್ಯ.ದ್ರಾಕ್ಷಿ ಬೆಳೆಗಾರರಿಗಾಗಿ ಆಧುನಿಕ ತಾಂತ್ರಿಕತೆ ಕುರಿತು ಕಾರ್ಯಗಾರ ಆಯೋಜಿಸಲಾಗಿತ್ತು.
***
ಅಂಕಿ–ಅಂಶ

500 ಟನ್‌
ದ್ರಾಕ್ಷಿಯನ್ನು ಮೇಳದಲ್ಲಿ ಮಾರಾಟ ಮಾಡುವ ಉದ್ದೇಶವನ್ನು ಹಾಪ್ಸ್‌ಕಾಮ್ಸ್ ಹೊಂದಿದೆ

2,000 ಟನ್‌
ಕಲ್ಲಂಗಡಿ ಮಾರಾಟ ಮಾಡಲು ನಿರ್ಧರಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.