ADVERTISEMENT

ಲಾಲ್‌ಬಾಗ್ ಫೋರ್ಟ್ ರಸ್ತೆಯ ಕಥೆ-ವ್ಯಥೆ

ಕಿಷ್ಕಿಂಧೆಯಂಥ ದಾರಿಯಲ್ಲಿ ಮೂಗು ಮುಚ್ಚಿಕೊಂಡೇ ಓಡಾಟ!

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಸ್ತೆಯುದ್ದಕ್ಕೂ ಹೊಂಡಗಳು, ಅಜುಬಾಜಿನ ಪಾದಚಾರಿ ಮಾರ್ಗದಲ್ಲಿ ಸಾಲಾಗಿ ನಿಂತ ಸೈಕಲ್, ದ್ವಿಚಕ್ರ ವಾಹನಗಳು, ಇಕ್ಕೆಲಗಳಲ್ಲಿ ನಿಲುಗಡೆಯಾದ ಲಾರಿಗಳು, ಭಾರಿಗಾತ್ರದ ವಾಹನಗಳು. ಇದು ಯಾವುದೋ ಒಳ ದಾರಿಯ ಚಿತ್ರಣವಲ್ಲ. ಬದಲಿಗೆ ನಗರದ ಪ್ರಮುಖ ಉದ್ಯಾನ ಲಾಲ್‌ಬಾಗ್‌ಗೆ ಸಂಪರ್ಕ ನೀಡುವ ಲಾಲ್‌ಬಾಗ್ ಫೋರ್ಟ್ ರಸ್ತೆಯ ಕತೆ-ವ್ಯಥೆ.

ಜೆ.ಸಿ.ರಸ್ತೆ, ಹೊಸೂರು ರಸ್ತೆ ಸಂಪರ್ಕ ಒದಗಿಸುವ ಈ ಪ್ರಮುಖ ರಸ್ತೆಯಲ್ಲಿ ಸದಾ ವಾಹನಗಳ ಓಡಾಟ, ಜನರ ಸಂಚಾರ ಇದ್ದೇ ಇರುತ್ತದೆ. ಆದರೆ ರಸ್ತೆ ಮಾತ್ರ  ಕಿಷ್ಕಿಂಧೆಯಂತಿದೆ. ಉದ್ಯಾನ ವೀಕ್ಷಣೆಗೆಂದು ಬರುವ ಸಾವಿರಾರು ಮಂದಿ ಪ್ರವಾಸಿಗರು ಈ ರಸ್ತೆಯ ಕಡೆಗೊಮ್ಮೆ ಸುಳಿದರೆ ಮತ್ತೆ ಉದ್ಯಾನದಕಡೆಗೆ ಮುಖ ಮಾಡುವುದಕ್ಕೆ ಹೆದರುವಂತಿದೆ. 

ಇಷ್ಟೆ ಸಾಕಾಗದು ಎಂಬಂತೆ ಅಲ್ಲಲ್ಲಿ ಸುರಿದ ತ್ಯಾಜ್ಯದ ರಾಶಿ ಗಬ್ಬೆದು ಮೂಗು ಮುಚ್ಚಿಕೊಂಡೇ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.  ಈ ಮಧ್ಯೆ ಪಾದಚಾರಿ ಮಾರ್ಗವೆಲ್ಲ ಒಡೆದು ದುರಾವಸ್ಥೆಗೆ ತಲುಪಿರುವುದರಿಂದ ಜನರು ವಾಹನಗಳ ನಡುವೆಯೇ ಸಿಲುಕಿಕೊಂಡು ಪರದಾಡುವಂತಾಗಿದೆ. ಹೀಗಿದ್ದರೂ ಕೂಡ ಸ್ಥಳೀಯ ಆಡಳಿತ ಸಂಸ್ಥೆ, ಸಂಬಂಧಪಟ್ಟ ಇಲಾಖೆಯು ದಿವ್ಯ ನಿರ್ಲಕ್ಷ್ಯ ವಹಿಸಿದೆ.

ಕಾಣದ ಡಾಂಬರು!
ಮೂರು ವರ್ಷಗಳಿಗೊಮ್ಮೆ ಎಲ್ಲ ಪ್ರಮುಖ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತದೆ. ಡಾಂಬರೀಕರಣಗೊಂಡ ಎರಡು ವರ್ಷಗಳವರೆಗೆ ರಸ್ತೆಗಳ ನಿರ್ವಹಣೆಯನ್ನು ಗುತ್ತಿಗೆದಾರರೇ ವಹಿಸಿಕೊಂಡಿರುತ್ತಾರೆ. ಅಷ್ಟರೊಳಗೆ ಡಾಂಬರು ಕಿತ್ತು ಬಂದರೆ ಅದನ್ನು ಮರು ದುರಸ್ತಿ ಮಾಡುವ ಜವಾಬ್ದಾರಿ ಗುತ್ತಿಗೆದಾರರಿಗೆ ಇರುತ್ತದೆ. ಲಾಲ್‌ಬಾಗ್ ಪೋರ್ಟ್ ರಸ್ತೆಯ ಡಾಂಬರು ಕಾಣದೇ ಹಲವು ವರ್ಷಗಳೇ ಕಳೆದಿದೆ.

ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಪಾಲಿಕೆಯ ಪ್ರಮುಖ ರಸ್ತೆಗಳ ಉಸ್ತುವಾರಿ ವಿಭಾಗದ ಎಂಜಿನಿಯರ್ ಲಕ್ಷ್ಮೀಶ, `ಈ ರಸ್ತೆಯ ಡಾಂಬರೀಕರಣಗೊಂಡು ನಾಲ್ಕು ವರ್ಷಗಳು ಕಳೆದಿರಬಹುದು. ವಾರ್ಡ್‌ಮಟ್ಟದಲ್ಲಿಯೂ ಡಾಂಬರೀಕರಣ ಹಾಕಿದಂತಿಲ್ಲ. ಈ ಬಗ್ಗೆ ಸದ್ಯದಲ್ಲಿಯೇ ಪರಿಶೀಲನೆ ನಡೆಸುತ್ತೇನೆ' ಎಂದು ತಿಳಿಸಿದರು.

ಉಕ್ಕಿನ ಸೇತುವೆ!
ವಾಹನ ದಟ್ಟಣೆ ಹೆಚ್ಚಿರುವುದರಿಂದ ಜೆ.ಸಿ. ರಸ್ತೆ, ಲಾಲ್‌ಬಾಗ್ ಫೋರ್ಟ್ ರಸ್ತೆ ಕೂಡುವ ಮಿನರ್ವ ವೃತ್ತದಲ್ಲಿ ಉಕ್ಕಿನ ಸೇತುವೆಯನ್ನು ನಿರ್ಮಾಣ ಮಾಡುವ ಯೋಜನೆಯ ಬಗ್ಗೆ 2009ರಲ್ಲಿ ಪಾಲಿಕೆಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಭಾರಿ ಗಾತ್ರದ ವಾಹನಗಳು ಈ ರಸ್ತೆಯಲ್ಲಿ ಓಡಾಡುವುದರಿಂದ ಈ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಈ ಯೋಜನೆಯು ಅನುಷ್ಠಾನಗೊಳ್ಳದೇ ಘೋಷಣೆಯಾಗಿಯೇ ಉಳಿದಿದೆ.

ಸಂಚಾರ ತಜ್ಞ  ಶ್ರೀಹರಿ, `ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ವಿದೇಶದಲ್ಲಿರುವಂತೆ ಬಡಾವಣೆಗೆ ಸಮೀಪವಿರುವ ಉದ್ಯಾನಗಳಲ್ಲಿ ತಳಮಹಡಿಯನ್ನು ನಿರ್ಮಾಣ ಮಾಡಿ, ವಾಹನ ನಿಲುಗಡೆಗೆ ಅವಕಾಶ ನೀಡಬೇಕು. ಹಾಗಾದಾಗ ಮಾತ್ರ ಚಿಕ್ಕ ರಸ್ತೆಯಲ್ಲಿ ಪಾದಚಾರಿಗಳು  ಹಾಗೂ ವಾಹನ ಸವಾರರು ಯಾವುದೇ ತೊಂದರೆಯಿಲ್ಲದೇ ಓಡಾಡಲು ಸಾಧ್ಯವಾಗುತ್ತದೆ. ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ನಿಜ ಉದ್ದೇಶವು ಈಡೇರಬೇಕು' ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.