ADVERTISEMENT

ಲಿಫ್ಟ್ ಅಡಿಯಿಂದ ಯುವಕ ಪಾರು

56 ಗಂಟೆ ಜೀವನ್ಮರಣದ ಹೋರಾಟ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:57 IST
Last Updated 9 ಜುಲೈ 2013, 19:57 IST

ಬೆಂಗಳೂರು: ಕಾಡುಬಿಸನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಅಳವಡಿಸಲಾಗಿದ್ದ ಲಿಫ್ಟ್‌ನ ಕೆಳಗೆ ಸಿಲುಕಿ 56 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಸುಧಾಕರ್ (27) ಎಂಬ ಯುವಕ ಮಂಗಳವಾರ ಸಂಜೆ ಜೀವಂತವಾಗಿ ಪತ್ತೆಯಾಗಿದ್ದಾರೆ.

ಮೂಲತಃ ಮಂಗಳೂರಿನವರಾದ ಸುಧಾಕರ್, ವರ್ಷದ ಹಿಂದೆ ನಗರಕ್ಕೆ ಬಂದು ಸ್ನೇಹಿತರೊಂದಿಗೆ ಹೂಡಿಯಲ್ಲಿ ವಾಸವಾಗಿದ್ದರು. ಕಾಡುಬಿಸನಹಳ್ಳಿ ನಿರ್ಮಾಣವಾಗುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅವರು, ಭಾನುವಾರ (ಜು.7) ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗುವುದಾಗಿ ಸ್ನೇಹಿತರಿಗೆ ಹೇಳಿ ಹೋಗಿದ್ದರು. ಆದರೆ, ತಡರಾತ್ರಿಯಾದರೂ ಅವರು ವಾಪಸ್ ಬಾರದ ಕಾರಣ ಸ್ನೇಹಿತರು ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ಅವರು ಸಂಪರ್ಕಕ್ಕೆ ಸಿಗದ ಕಾರಣ ಸ್ನೇಹಿತರು ಆತಂಕಗೊಂಡು ಸುಧಾಕರ್‌ಗಾಗಿ ಹುಡುಕಾಟ ನಡೆಸಿದ್ದಾರೆ.

`ಸುಧಾಕರ್‌ಗಾಗಿ ರಾತ್ರಿಯಿಡೀ ಹುಡುಕಾಟ ನಡೆಸಿ ವಿಫಲವಾದೆವು. ಬಳಿಕ ಆತ ಕಾಣೆಯಾಗಿರುವ ಬಗ್ಗೆ ಮಹದೇವಪುರ ಠಾಣೆಯಲ್ಲಿ ಸೋಮವಾರ ಬೆಳಿಗ್ಗೆ ದೂರು ದಾಖಲಿಸಿದ್ದೆವು. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಕರೆ ಮಾಡಿದ ಪೊಲೀಸರು, ಸುಧಾಕರ್ ಪತ್ತೆಯಾಗಿರುವುದಾಗಿ ಹೇಳಿದರು' ಎಂದು ಸುಧಾಕರ್ ಅವರ ಸ್ನೇಹಿತ ಸುಭಾಷ್ `ಪ್ರಜಾವಾಣಿ'ಗೆ ತಿಳಿಸಿದರು.

`ದೂರು ದಾಖಲಿಸಿಕೊಂಡ ಬಳಿಕ ಸುಧಾಕರ್ ಅವರು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಯಿತು. ಆದರೆ, ಮೊದಲ ದಿನ ಯಾವುದೇ ಸುಳಿವು ಸಿಗಲಿಲ್ಲ. ಮಂಗಳವಾರ ಬೆಳಿಗ್ಗೆ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಎರಡು ಬಾರಿ ರಿಂಗ್ ಆಗಿ ಸ್ವಿಚ್ ಆಫ್ ಆಯಿತು. ಮೊಬೈಲ್ ರಿಂಗ್ ಆದ ಕೂಡಲೇ ಸಿಬ್ಬಂದಿಗೆ ಮಾಹಿತಿ ನೀಡಿ ಯಾವ ಮೊಬೈಲ್ ಗೋಪುರದಿಂದ (ಟವರ್) ಕರೆ ಹೋಗುತ್ತಿದೆ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಯಿತು.

ಆಗ ಸುಧಾಕರ್ ಅವರ ಮೊಬೈಲ್, ಎಮ್ಮಲೂರಿನಲ್ಲಿರುವ ಟವರ್‌ನಿಂದ ಸಂಪರ್ಕ ಪಡೆದುಕೊಂಡಿರುವುದು ಗೊತ್ತಾಯಿತು. ಆ ಅಪಾರ್ಟ್‌ಮೆಂಟ್ ಕೂಡ ಎಮ್ಮಲೂರು ವ್ಯಾಪ್ತಿಯಲ್ಲೇ ಬರುವುದರಿಂದ ಸ್ಥಳಕ್ಕೆ ತೆರಳಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ಅವರು ಲಿಫ್ಟ್‌ನ ಕೆಳಗೆ ಪತ್ತೆಯಾದರು' ಎಂದು ಮಹದೇವಪುರ ಇನ್‌ಸ್ಪೆಕ್ಟರ್ ಕೆ.ಎಸ್.ನಾಗರಾಜ್ ತಿಳಿಸಿದರು.

ಸುಧಾಕರ್ ಸಾವನ್ನಪ್ಪಿರಬಹುದೆಂದು ಭಾವಿಸಿ ಅವರ ದೇಹವನ್ನು ಹೊರತೆಗೆದಾಗ ಅವರು ಉಸಿರಾಡುತ್ತಲೇ ಇದ್ದರೂ. ಕೂಡಲೇ ಅವರನ್ನು ಮಾರತ್‌ಹಳ್ಳಿಯ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅವರ ಮಿದುಳಿಗೆ ಪೆಟ್ಟು ಬಿದ್ದಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT