ADVERTISEMENT

ಲಿಫ್ಟ್ ಅವಘಡ: ಗಾಯಾಳು ಚೇತರಿಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 20:00 IST
Last Updated 10 ಜುಲೈ 2013, 20:00 IST

ಬೆಂಗಳೂರು: ಕಾಡುಬಿಸನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್‌ಮೆಂಟ್‌ವೊಂದರ ಲಿಫ್ಟ್‌ನಡಿ ಸುಮಾರು 56 ಗಂಟೆಗಳ ಕಾಲ ಸಿಲುಕಿಕೊಂಡು ಅಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಯುವಕ ಸುಧಾಕರ್(27) ಅವರಿಗೆ ಬುಧವಾರ ಪ್ರಜ್ಞೆ ಬಂದಿದೆ. ಆದರೆ, ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ಅವರು ವಿವರಿಸಿಲ್ಲ.

ಲಿಫ್ಟ್ ಮೆಕ್ಯಾನಿಕ್ ಆಗಿದ್ದ ಅವರು, ಭಾನುವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಮಂಗಳವಾರ ಸಂಜೆ ಐದು ಗಂಟೆ ಸುಮಾರಿಗೆ ಲಿಫ್ಟ್‌ನಡಿ ಅವರು ಪತ್ತೆಯಾಗಿದ್ದರು. ಕೂಡಲೇ, ಅವರನ್ನು ಮಾರತ್‌ಹಳ್ಳಿಯಲ್ಲಿರುವ ವಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮಧ್ಯಾಹ್ನ ಅವರಿಗೆ ಪ್ರಜ್ಞೆ ಬಂದಿದ್ದು, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.

`ಅದು ಏಳು ಅಂತಸ್ತಿನ ಕಟ್ಟಡವಾಗಿದ್ದು, ಲಿಫ್ಟ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಸುಧಾಕರ್ ಅವರು ಭಾನುವಾರ ಎರಡನೇ ಮಹಡಿಯಲ್ಲಿ ಲಿಫ್ಟ್ ಅಳವಡಿಸುವಾಗ ಈ ದುರ್ಘಟನೆ ನಡೆದಿತ್ತು. ಘಟನಾ ವೇಳೆ ಸ್ಥಳದಲ್ಲಿ ಸಹ ಕಾರ್ಮಿಕರು ಇರಲಿಲ್ಲವಾದ್ದರಿಂದ ಈ ಅವಘಡದ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಸುಧಾಕರ್ ಗುಣಮುಖರಾಗಿ ಹೇಳಿಕೆ ನೀಡಿದ ಬಳಿಕವಷ್ಟೆ ಅವಘಡ ಹೇಗೆ ಸಂಭವಿಸಿತು ಎಂಬುದು ಗೊತ್ತಾಗಲಿದೆ ಎಂದು ಮಹದೇವಪುರ ಪೊಲೀಸರು ಹೇಳಿದ್ದಾರೆ.

`ಕಟ್ಟಡ ನಿರ್ಮಾಣ ವೇಳೆ ಕಾರ್ಮಿಕರಿಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಆಕಸ್ಮಿಕವಾಗಿ ಈ ದುರ್ಘಟನೆ ನಡೆದಿದ್ದು, ವೈದ್ಯಕೀಯ ವೆಚ್ಚವನ್ನು ನಾವೇ ಭರಿಸುತ್ತೇವೆ' ಎಂದು ಗುತ್ತಿಗೆದಾರ ಶೆಟ್ಟಿಗಾರ್ ತಿಳಿಸಿದರು.

ಕೊನೆಯ ದಿನದ ಕೆಲಸ: `ಸುಧಾಕರ್ ವರ್ಷದಿಂದ ಲಿಫ್ಟ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಮುಂದಿನ ವಾರ ದುಬೈಗೆ ಹೋಗಬೇಕಿದ್ದ ಆತ, ಭಾನುವಾರ (ಜು.7) ರಾತ್ರಿಯೇ ತನ್ನ ಊರಿಗೆ ತೆರಳುವವನಿದ್ದ. ಹೀಗಾಗಿ, ಭಾನುವಾರ ಆತನ ಕೊನೆಯ ದಿನದ ಕೆಲಸವಾಗಿತ್ತು. ಆದರೆ, ಅದೇ ದಿನದಿಂದ ಸುಧಾಕರ್ ನಾಪತ್ತೆಯಾಗಿದ್ದ' ಎಂದು ಸುಧಾಕರ್ ಸ್ನೇಹಿತರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT