ADVERTISEMENT

ಲೈಂಗಿಕ ಕಿರುಕುಳ: ಪ್ರಯಾಣಿಕರ ವೇದಿಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 20:12 IST
Last Updated 4 ಸೆಪ್ಟೆಂಬರ್ 2013, 20:12 IST

ಬೆಂಗಳೂರು: ನಗರದ ಜನರಲ್ಲಿ ಸಾಮೂಹಿಕ ಸಾರಿಗೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ಬಸ್ ದಿನಾಚರಣೆ ಬುಧವಾರ ನಡೆಯಿತು.

ಇದೇ ಸಂದರ್ಭದಲ್ಲಿ ಬಸ್ ಪ್ರಯಾಣಿಕರ ವೇದಿಕೆ ಕರಾಳ ದಿನ ಆಚರಿಸಿತು. ಬಿಎಂಟಿಸಿ ಬಸ್‌ಗಳಲ್ಲಿ ಲೈಂಗಿಕ ಕಿರುಕುಳ ಹೆಚ್ಚುತ್ತಿದೆ ಎಂದು ಆರೋಪಿಸಿ ವೇದಿಕೆ ವತಿಯಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.

`ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರತಿ ಮೂರು ಮಹಿಳೆಯರ ಪೈಕಿ ಇಬ್ಬರು ಮಹಿಳೆಯರು ಸಹ-ಪ್ರಯಾಣಿಕರಿಂದ, ಚಾಲಕರು ಹಾಗೂ ನಿರ್ವಾಹಕರಿಂದ ಈ ರೀತಿಯ ದೌರ್ಜನ್ಯ ಎದುರಿಸುತ್ತಾರೆ. 2012-13ನೇ ಸಾಲಿನಲ್ಲಿ ನಗರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ 2,647 ಮಹಿಳೆಯರನ್ನು ಸಂದರ್ಶಿಸಲಾಯಿತು. ಈ ಪೈಕಿ 1,803 ಮಂದಿ ಬಸ್‌ಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಕಿರುಕುಳಗಳನ್ನು ಎದುರಿಸಿದ್ದಾರೆ. ಅಂದರೆ ಬಸ್‌ಗಳಲ್ಲಿ ಓಡಾಡುವ ಒಟ್ಟು ಮಹಿಳೆಯರ ಪೈಕಿ ಶೇ 69 ಮಹಿಳೆಯರು ವಿವಿಧ ರೀತಿಯ ಲೈಂಗಿಕ ಕಿರುಕುಳಗಳನ್ನು ಎದುರಿಸುತ್ತಾರೆ. ಅಸಭ್ಯ ಭಾಷೆಯ ಉಪಯೋಗ, ದಿಟ್ಟಿಸಿ ನೋಡುವುದು, ಮುಟ್ಟುವುದು, ಸ್ಪರ್ಶಿಸುವುದು, ಅಸಭ್ಯ ವರ್ತನೆ, ಹಿಂಬಾಲಿಸುವುದು, ಅಪ್ಪಣೆಯಿಲ್ಲದೆ ಛಾಯಾಚಿತ್ರಗಳನ್ನು ಹಿಡಿಯುವುದು ಅಥವಾ ವಿಡಿಯೋ ತೆಗೆಯುವುದು ಸೇರಿದಂತೆ ಹಲವು ರೀತಿಯ ದೈಹಿಕ ಕಿರುಕುಳಗಳು ಇದರಲ್ಲಿ ಸೇರಿವೆ' ಎಂದು ವೇದಿಕೆಯ ಪದಾಧಿಕಾರಿಗಳು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.