ADVERTISEMENT

ಲೊಕೇಷನ್ ಕಳುಹಿಸಿ ಆತ್ಮಹತ್ಯೆ!

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 20:14 IST
Last Updated 8 ಜೂನ್ 2017, 20:14 IST
ಪೆಂಚಾಲ ಕಿಶೋರ್
ಪೆಂಚಾಲ ಕಿಶೋರ್   

ಬೆಂಗಳೂರು: ಸಂಬಂಧಿಯೊಬ್ಬರಿಗೆ ವಾಟ್ಸ್‌ಆ್ಯಪ್‌ನಲ್ಲಿ ಜಕ್ಕೂರು ಸ್ಮಶಾನದ ಮ್ಯಾಪ್‌ ಲೊಕೇಷನ್ ಕಳುಹಿಸಿದ ಪೆಂಚಾಲ ಕಿಶೋರ್ (24) ಎಂಬುವರು, ‘ನನ್ನ ಶವವನ್ನು ಈ ಪ್ರದೇಶದಲ್ಲಿ ಪಡೆದುಕೊಳ್ಳಿ’ ಎಂದು ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರಪ್ರದೇಶದ ಕಿಶೋರ್, ಎಂಜಿನಿಯರಿಂಗ್ ಪದವಿ ಮುಗಿಸಿ ಆರು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಬಿಇಎಲ್ ರಸ್ತೆಯ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ನೆಲೆಸಿದ್ದ ಅವರು, ಉದ್ಯೋಗ ಅರಸಿ ಹಲವು ಕಂಪೆನಿಗಳನ್ನು ಅಲೆದಿದ್ದರು. ಆದರೆ, ಕೆಲಸ ಸಿಕ್ಕಿರಲಿಲ್ಲ.
ಕಿಶೋರ್ ಸಂಬಂಧಿ ಶ್ರೀರಾಮಕಂಠ ಅವರು ಐಟಿಪಿಎಲ್‌ ಉದ್ಯೋಗಿಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಸೀಮೆಎಣ್ಣೆ ತೆಗೆದುಕೊಂಡು ಜಕ್ಕೂರು ಸ್ಮಶಾನಕ್ಕೆ ತೆರಳಿರುವ ಕಿಶೋರ್, ಶ್ರೀರಾಮಕಂಠ ಅವರಿಗೆ ಆ ಲೊಕೇಷನ್ ಕಳುಹಿಸಿದ್ದಾರೆ. ಅಲ್ಲದೆ, ‘ಪ್ಲೀಸ್ ಕಲೆಕ್ಟ್ ಮೈ ಬಾಡಿ ಹಿಯರ್. ಬೈ ಬೈ’ ಎಂದು ಸಂದೇಶವನ್ನೂ ಕಳುಹಿಸಿದ್ದಾರೆ.

ಇದರಿಂದ ಗಾಬರಿಗೊಂಡ ಅವರು, ಹಲವು ಬಾರಿ ಕಿಶೋರ್‌ಗೆ ಕರೆ ಮಾಡಿದ್ದಾರೆ. ಆದರೆ, ಸಂಪರ್ಕಕ್ಕೆ ಸಿಕ್ಕಿಲ್ಲ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ (100) ವಿಷಯ ತಿಳಿಸಿದ್ದಾರೆ.  ತಕ್ಷಣ ಹೊಯ್ಸಳ ಪೊಲೀಸರು ಸ್ಮಶಾನಕ್ಕೆ ಹೋಗಿದ್ದಾರೆ. ಸುಮಾರು ಹೊತ್ತು ಹುಡುಕಾಡಿದರೂ ಕಿಶೋರ್ ಪತ್ತೆಯಾಗಿಲ್ಲ.

ADVERTISEMENT

ಕೊನೆಗೆ ಸ್ಮಶಾನದ ಆವರಣದಲ್ಲಿರುವ ಪೊದೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ಪೊಲೀಸರು, ಅಲ್ಲಿಗೆ ಹೋಗಿ ನೋಡಿದಾಗ ಮೃತದೇಹ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶ್ರೀರಾಮಕಂಠ ಅವರು ಶವವನ್ನು ಗುರುತಿಸಿದ್ದಾರೆ.

ಆರ್ಥಿಕ ಸಂಕಷ್ಟವಿತ್ತು
‘ಕಿಶೋರ್ ತಂದೆ ಪೆಂಚಾಲಯ್ಯ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೇ ಸಾಕಷ್ಟು ಖರ್ಚು ಮಾಡಲಾಗಿತ್ತು. ಇದರಿಂದಾಗಿ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಎಂಜಿನಿಯರಿಂಗ್ ಪದವಿ ಪಡೆದರೂ, ಒಳ್ಳೆಯ ಕೆಲಸ ಸಿಗಲಿಲ್ಲವೆಂಬ ಕೊರಗು ಕಿಶೋರ್‌ನಲ್ಲಿತ್ತು. ಪ್ರತಿದಿನ ನನಗೆ ಕರೆ ಮಾಡಿ, ಇದೇ ವಿಚಾರವಾಗಿ ಬೇಸರ ವ್ಯಕ್ತಪಡಿಸುತ್ತಿದ್ದ. ನಾನೂ ಸಮಾಧಾನಹೇಳುತ್ತಿದ್ದೆ’ ಎಂದು ಶ್ರೀರಾಮಕಂಠ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.