ADVERTISEMENT

ಲೋಕಪಾಲ ಸಮಿತಿ ಸದಸ್ಯತ್ವದ ಮರುಚಿಂತನೆ- ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 19:45 IST
Last Updated 21 ಏಪ್ರಿಲ್ 2011, 19:45 IST

ಬೆಂಗಳೂರು: ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲಿ ಸದಸ್ಯರಾಗಿರುವ ನಾಗರಿಕ ಪ್ರತಿನಿಧಿಗಳ ವಿಷಯದಲ್ಲಿ ರಾಜಕೀಯ ವ್ಯಕ್ತಿಗಳು ನಿರಂತರ ದೋಷಾರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ,  ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸುವ ಬಗ್ಗೆ ತಮ್ಮ ನಿರ್ಧಾರವನ್ನು ಮರು ಪರಿಶೀಲಿಸಲು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ತೀರ್ಮಾನಿಸಿದ್ದಾರೆ.

ಈ ಕುರಿತು ಗುರುವಾರ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಮೊದಲು ಈ ವಿಷಯವನ್ನು ನನ್ನ ಸಹೋದ್ಯೋಗಿಗಳ ಜೊತೆ ಚರ್ಚಿಸುತ್ತೇನೆ. ನಂತರ ನಿರ್ಧಾರಕ್ಕೆ ಬರುತ್ತೇನೆ’ ಎಂದು ತಿಳಿಸಿದರು.

‘ಮಸೂದೆ ರಚನಾ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಪ್ರಯತ್ನ ನಡೆಯುತ್ತಿದೆ.  ಭ್ರಷ್ಟಾಚಾರದ ವಿರುದ್ಧ ಆಂದೋಲನ ಆರಂಭಿಸಿದ ಅಣ್ಣಾ ಹಜಾರೆ ಅವರ ವಿರುದ್ಧ ಮೊದಲು ಅಪಪ್ರಚಾರ ನಡೆಯಿತು. ಈಗ ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್ ಅವರತ್ತ ಆರೋಪ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ರೀತಿಯಲ್ಲಿ ಯಡಿಯೂರಪ್ಪ ವಿರುದ್ಧ ಹೋರಾಟ ನಡೆಸಿದವರು ಯಾರೂ ಇಲ್ಲ. ಈಗಾಗಲೇ ಅವರಿಗೆ ನೋಟಿಸ್ ಜಾರಿ ಮಾಡಿದ್ದೇನೆ, ವಿವರಣೆ ಕೇಳಿದ್ದೇನೆ. ಆದರೆ ತನಿಖೆ ಪ್ರಕ್ರಿಯೆಯಲ್ಲಿ ನನ್ನ ಕೈಕಟ್ಟಿ ಹಾಕಲಾಗಿದೆ’ ಎಂದರು.

‘ಮುಖ್ಯಮಂತ್ರಿಯ ವಿರುದ್ಧದ ಪ್ರಕರಣಗಳ ತನಿಖೆಗೆ ನಾನು ಹಿಂದೇಟು ಹಾಕಿಲ್ಲ. ಹಾಗಿದ್ದರೆ ಭೂ ಹಗರಣಗಳ ತನಿಖೆಗೆಂದೇ ಸರ್ಕಾರ ನೇಮಕ ಮಾಡಿದ ಆಯೋಗಕ್ಕೆ ಈ ಪ್ರಕರಣಗಳನ್ನು ನಾನು ವರ್ಗಾವಣೆ ಮಾಡಬಹುದಿತ್ತಲ್ಲ’ ಎಂದು ಮರುಪ್ರಶ್ನೆ ಹಾಕಿದರು.

ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರು ಸಮಿತಿಯಲ್ಲಿ ಮುಂದುವರಿಯುವುದು ಸೂಕ್ತವೇ ಎಂಬ ಪ್ರಶ್ನೆಗೆ, ‘ಅದನ್ನು ಅವರೇ ನಿರ್ಧರಿಸಬೇಕು. ಈಗ ನಾವು ಯಾವುದೇ ಅಭಿಪ್ರಾಯವನ್ನೂ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.