ADVERTISEMENT

ವಂಚನೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:52 IST
Last Updated 13 ಡಿಸೆಂಬರ್ 2013, 19:52 IST

ಬೆಂಗಳೂರು: ನಿವೃತ್ತ ಎಸಿಪಿಯೊಬ್ಬರಿಗೆ ನಿವೇಶನ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಧನಂಜಯ್‌ (40) ಮತ್ತು ಅನುರಾಧಾ ಪಡಿ­ಯಾರ್‌ (52) ಎಂಬುವರನ್ನು ಬಸವನ­ಗುಡಿ ಪೊಲೀಸರು ಬಂಧಿಸಿದ್ದಾರೆ.

‘ಹೈಕೋರ್ಟ್‌ ವಿಚಕ್ಷಣೆ ದಳದಲ್ಲಿ ಎಸಿಪಿಯಾಗಿದ್ದ ಜಿ.ಪೃಥ್ವಿರಾಜ್‌ ನಿವೃತ್ತಿಯ ನಂತರ ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದರು. ಮಂಗಳೂರಿನ ಲತೀಫ್‌ ಎಂಬುವರ ಮೂಲಕ 2011ರಲ್ಲಿ ಪೃಥ್ವಿ­ರಾಜ್‌ ಅವರಿಗೆ ಧನಂಜಯ್‌ ಪರಿಚಯವಾಗಿದ್ದ.

ಜಯನಗರದಲ್ಲಿ ಎರಡು ನಿವೇಶನ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆದಿದ್ದ ಆತ ಬಳಿಕ ಅವರಿಗೆ ವಂಚಿಸಿದ್ದ. ಬಗ್ಗೆ ಪೃಥ್ವಿರಾಜ್‌ ಪತ್ನಿ ಅಂಬಿಕೇಶ್ವರಿ, ಸಿದ್ದಾಪುರ ಠಾಣೆಗೆ ಆಗಸ್ಟ್‌ ತಿಂಗಳಲ್ಲಿ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಹೊಸೂರಿನಲ್ಲಿ ನಮ್ಮ ಕುಟುಂಬದ ಎರಡು ಸಾವಿರ ಎಕರೆ ಜಮೀನಿದೆ. ಈ ಜಮೀನನ್ನು ತನ್ನ ಪರಿಚಿತರೊಬ್ಬರು ಕೊಂಡುಕೊಳ್ಳಲು ಆಸ್ತಕರಾಗಿ­ದ್ದಾರೆ ಎಂದು ಧನಂಜಯ್‌ ತಿಳಿಸಿದ್ದ. ಆ ನಂತರ  ನಿವೇಶನ ಕೊಡಿಸುವುದಾಗಿ ನಂಬಿಸಿ ರೂ35 ಲಕ್ಷ ಹಣ ಪಡೆದುಕೊಂಡಿದ್ದ’ ಎಂದು ಅಂಬಿಕೇಶ್ವರಿ ತಿಳಿಸಿದರು.

‘ಈ ಮುನ್ನ ಕಡಿಮೆ ಬೆಲೆಗೆ ಕಾರು ಕೊಡಿಸುವುದಾಗಿ ನಮ್ಮಿಂದ ಹಣ ಪಡೆದಿದ್ದ ಧನಂಜಯ್‌, ರೂ2.10 ಲಕ್ಷಕ್ಕೆ ಒಂದು ‘ಹುಂಡೈ ಐ10’ ಕಾರು ಕೊಡಿಸಿದ್ದ. ಈ ವಿಷಯ ತಿಳಿದ ಅಕ್ಕಪಕ್ಕದವರು ತಮಗೂ ಕಡಿಮೆ ಬೆಲೆಗೆ ಕಾರು ಕೊಡಿಸುವಂತೆ ಕೇಳಿಕೊಂಡರು.
ಹೀಗಾಗಿ ಅವರಿಂದ ಹಣ ಸಂಗ್ರಹಿಸಿ ಧನಂಜಯ್‌ಗೆ ಕೊಟ್ಟಿದ್ದೆವು. ಹಣ ಪಡೆದ ನಂತರ ಕಾರುಗಳನ್ನು ಕೊಡಿಸಲು ಆತ ವಿಳಂಬ ಮಾಡುತ್ತಿದ್ದ’ ಎಂದು ಅವರು ತಿಳಿಸಿದರು.

‘ಕಾರುಗಳು ಹಾಗೂ ನಿವೇಶನ ಕೊಡಿಸುವುದಾಗಿ ಒಟ್ಟು ರೂ1.20 ಕೋಟಿ ಹಣ ಪಡೆದಿದ್ದ ಆತ, ಕಳೆದ ಏಪ್ರಿಲ್‌ ತಿಂಗಳಿಂದ ತಲೆಮರೆಸಿಕೊಂಡಿದ್ದ. ಆ ನಂತರ ತನಿಖೆ ನಡೆಸದಂತೆ ಆತ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ’ ಎಂದು ಅವರು ಹೇಳಿದರು.
‘ಜಯನಗರ ಏಳನೇ ಹಂತದಲ್ಲಿ ‘ಮಿತ್ರಾ ಮೀಡಿಯಾ ಹೌಸ್‌’ ಎಂಬ ಹೆಸರಿನ ಕಚೇರಿ ತೆರೆದಿದ್ದ ಆತ ಹಲವರಿಗೆ ವಂಚಿಸಿದ್ದಾನೆ. ಚೆನ್ನೈನ ಟಿ.ನಗರದಲ್ಲಿ ಆತ ಇದೇ ಹೆಸರಿನ ಕಚೇರಿ ತೆರೆದು ಅಲ್ಲಿಯೂ ಹಲವರಿಗೆ ವಂಚಿಸಿದ್ದಾನೆ. ಆತನ ವಂಚನೆಯ ಜಾಲದಲ್ಲಿ ಅನುರಾಧಾ ಸೇರಿದಂತೆ ಹಲವರು ಭಾಗಿಗಳಾಗಿದ್ದಾರೆ’ ಎಂದು ಅವರು ಆರೋಪಿಸಿದರು.

ಆರೋಪಿಗಳ ವಿರುದ್ಧ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಇತರೆ ಆರೋಪಿಗಳಾದ ಕೃಷ್ಣಮೂರ್ತಿ, ಸುನಿಲ್‌್, ಸೋಹಲ್‌, ಗಿರೀಶ್‌, ಚಂದ್ರು ಮತ್ತು ರಾಜೇಶ್‌ ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.