ಬೆಂಗಳೂರು: ಗಾಂಧಿನಗರದ ಆನಂದ ನಿಲಯ ವಾಣಿಜ್ಯ ಕಟ್ಟಡದಲ್ಲಿನ ವಕೀಲರ ಕಚೇರಿಯೊಂದರಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಆಕಸ್ಮಿಕ ಅಗ್ನಿ ಅನಾಹುತದಲ್ಲಿ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದು, ನಾಲ್ಕು ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ಗಾಂಧಿನಗರ ಮೂರನೆ ಅಡ್ಡರಸ್ತೆಯ ಆನಂದ ನಿಲಯ ವಾಣಿಜ್ಯ ಕಟ್ಟಡದ ಒಂದನೆ ಅಂತಸ್ತಿನಲ್ಲಿರುವ ಬಾಲಕೃಷ್ಣ ಎಂಬ ವಕೀಲರ ಕಚೇರಿಯಲ್ಲಿ ಈ ದುರ್ಘಟನೆ ನಡೆದಿದೆ.
ಜಕ್ಕೂರಿನ ನಯಾಜ್ (61) ಮತ್ತು ರಾಜಾಜಿನಗರದ ಸುಂದರ್ (65) ಮೃತಪಟ್ಟವರು. ಅದೇ ಕಟ್ಟಡದ ಮೂರನೆ ಅಂತಸ್ತಿನಲ್ಲಿ ಕಚೇರಿ ಹೊಂದಿರುವ ವಕೀಲ ಶ್ರೀಧರ್, ಟೈಲರ್ ಮಳಿಗೆ ಇಟ್ಟುಕೊಂಡಿರುವ ಅಹಮ್ಮದ್ ಮತ್ತು ಫೈನಾನ್ಸ್ ಕಚೇರಿಯ ಕೆಲಸಗಾರ ಸುನಿಲ್ ಸೇರಿದಂತೆ 4 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸರ್ಕಾರಿ ನಿವೃತ್ತ ನೌಕರರಾದ ನಯಾಜ್ ಅವರು ಬಾಲಕೃಷ್ಣ ಅವರ ಕಚೇರಿಯಲ್ಲಿ ಬೆರಳಚ್ಚುಗಾರರಾಗಿದ್ದರು. ಸುಂದರ್ ಅವರು ಮನೆಯ ಬಾಡಿಗೆ ಕರಾರು ಪತ್ರದ ನೋಟರಿ ಮಾಡಿಸಿಕೊಳ್ಳಲು ಬಾಲಕೃಷ್ಣ ಅವರ ಕಚೇರಿಗೆ ಬಂದಿದ್ದರು.
ಅಗ್ನಿ ಅನಾಹುತ ಸಂಭವಿಸುವುದಕ್ಕೂ ಅರ್ಧ ತಾಸಿಗೂ ಮುಂಚೆ ಕಚೇರಿಯಲ್ಲೆ ಇದ್ದ ಬಾಲಕೃಷ್ಣ ಅವರು ಕಿರಿಯ ವಕೀಲರಾದ ರಮೇಶ್ ಮತ್ತು ವೆಂಕಟೇಶ್ ಎಂಬುವರೊಂದಿಗೆ ಊಟ ಮಾಡಲು ಸಮೀಪದ ಹೋಟೆಲ್‌ಗೆ ಹೋಗಿದ್ದರು. ಈ ವೇಳೆ ಕಚೇರಿಯೊಳಗೆ ಬೆಂಕಿ ಹೊತ್ತಿಕೊಂಡಿದೆ.
ಆಗ ಕಚೇರಿಯಲ್ಲಿದ್ದ ನಯಾಜ್ ಮತ್ತು ಸುಂದರ್ ಅವರು ನೆರವಿಗಾಗಿ ಕೂಗಿಕೊಂಡಿದ್ದಾರೆ. ಆದರೆ, ಅವರ ಚೀರಾಟ ಕಚೇರಿಯ ಹೊರ ಭಾಗಕ್ಕೆ ಕೇಳಿಸಿಲ್ಲ. ಸಮಯ ಕಳೆದಂತೆ ಕಚೇರಿಯಲ್ಲಿನ ಸೋಫಾ, ದಾಖಲೆ ಪತ್ರಗಳು, ಪೀಠೋಪಕರಣಗಳಿಗೂ ಬೆಂಕಿ ವ್ಯಾಪಿಸಿದೆ. ಇದರಿಂದ ಮತ್ತಷ್ಟು ಆತಂಕಗೊಂಡ ಅವರು ರಕ್ಷಣೆ ಪಡೆಯಲು ಮರದ ಕ್ಯಾಬೀನ್‌ನೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಬೆಂಕಿಯ ಜ್ವಾಲೆ ಹೆಚ್ಚಾದಂತೆ ಕೊಠಡಿಯ ತುಂಬಾ ದಟ್ಟ ಹೊಗೆ ಆವರಿಸಿದೆ.
ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ನೋಡಿದ ಭದ್ರತಾ ಸಿಬ್ಬಂದಿ ರಮೇಶ್ ಎಂಬುವರು ಮಧ್ಯಾಹ್ನ 2.53ಕ್ಕೆ ಅಗ್ನಿಶಾಮಕ ನಿಯಂತ್ರಣ ಕೊಠಡಿ ಯವಾಗಿಲ್ಲ. ಇದರಿಂದಾಗಿ ಆ ನಾಲ್ಕೂ ಮಂದಿ ಪ್ರಾಣಾಪಾಯದಿಂದ ಪಾರಾಗಲು ಕಟ್ಟಡದ ಮಹಡಿಗೆ ಹೋಗಿ ನಿಂತಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಅಕ್ಕಪಕ್ಕದ ಕಟ್ಟಡಗಳ ಮೇಲೇರಿ ಏಣಿ ಮೂಲಕ ಅವರೆಲ್ಲರನ್ನೂ ಕೆಳಗಿಳಿಸಿದರು.
ಐದು ಅಂತಸ್ತಿನ ಆ ಕಟ್ಟಡದಲ್ಲಿ 22 ವಕೀಲರ ಕಚೇರಿಗಳಿವೆ. ಅಲ್ಲದೆ, ಫೈನಾನ್ಸ್, ಟೈಲರ್, ಬಟ್ಟೆ ಗೋದಾಮು ಮತ್ತಿತರ ಮಳಿಗೆಗಳಿವೆ. ಭಾನುವಾರ ರಜಾ ದಿನವಾದ ಕಾರಣ ಬಹುತೇಕ ಮಳಿಗೆಗಳು ಮುಚ್ಚಿದ್ದವು. ಬಾಲಕೃಷ್ಣ ಅವರು ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆಗೆ ಬರಲಿರುವ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಸಿದ್ಧತೆ ನಡೆಸಲು ಕಿರಿಯ ವಕೀಲರೊಂದಿಗೆ ಕಚೇರಿಗೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ನಿರ್ಲಕ್ಷ್ಯ ಪ್ರಕರಣ: ಕಟ್ಟಡದ ಮಾಲೀಕರ ಹೆಸರು ಆನಂದ್ ಎಂದು ತನಿಖೆಯಿಂದ ಗೊತ್ತಾಗಿದೆ. ಘಟನೆ ಸಂಬಂಧ ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಕಚೇರಿಯೊಳಗೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಘಟನೆಯಲ್ಲಿ ದಾಖಲೆ ಪತ್ರಗಳು, ಕಂಪ್ಯೂಟರ್, ಪೀಠೋಪಕರಣಗಳು ಸುಟ್ಟು ಹೋಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುರಕ್ಷತೆಯ ನಿರ್ಲಕ್ಷ್ಯ
‘ಕಟ್ಟಡದಲ್ಲಿ ಅಗ್ನಿ ಅನಾಹುತ ತಡೆಗೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಅಗ್ನಿನಂದಕ ಉಪಕರಣಗಳನ್ನು ಅಳವಡಿಸಿಲ್ಲ. ಕಟ್ಟಡದ ಮಾಲೀಕರು ಅಗ್ನಿ ಸುರಕ್ಷತೆ ಬಗ್ಗೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಸಹ ಪಡೆದುಕೊಂಡಿಲ್ಲ’ ಎಂದು ಉತ್ತರ ವಲಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಶಶಿಧರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಾಲೀಕರು ಕಟ್ಟಡ ನಿಯಮವನ್ನು ಉಲ್ಲಂಘಿಸಿ ಕಟ್ಟಡದ ಒಳ ಭಾಗದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಕಿರಿದಾದ ಕೊಠಡಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಿ ಬಾಡಿಗೆಗೆ ಕೊಟ್ಟಿಐದ್ದಾರೆ. ಕಟ್ಟಡದ ಲಿಫ್ಟ್ ಸಹ ಸುಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ.
15 ಮೀಟರ್‌ಗಿಂತ ಎತ್ತರವಿರುವ ಬಹುಮಹಡಿ ಕಟ್ಟಡಗಳಲ್ಲಿ ಲಿಫ್ಟ್‌ನ ಜತೆಗೆ ಎರಡು ಕಡೆ ಮೆಟ್ಟಿಲು ವ್ಯವಸ್ಥೆ ಇರಬೇಕೆಂಬ ನಿಯಮವಿದೆ. ಆದರೆ, ಈ ಕಟ್ಟಡದಲ್ಲಿ ಆ ನಿಯಮವನ್ನು ಉಲ್ಲಂಘಿಸಿ ಒಂದೇ ಕಡೆ ಕಿರಿದಾದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಕಟ್ಟಡದ ಮಾಲೀಕರು ಸುರಕ್ಷತೆಯ ವಿಷಯವಾಗಿ ಸಾಕಷ್ಟು ನಿರ್ಲಕ್ಷ್ಯ ತೋರಿದ್ದು, ಈ ಸಂಬಂಧ ಪೊಲೀಸರಿಗೆ ವರದಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಮಹಡಿಗೆ ಹೋದೆವು
ಕೆಳ ಅಂತಸ್ತಿನಿಂದ ದಟ್ಟ ಹೊಗೆ ಬರುತ್ತಿತ್ತು. ಇದರಿಂದ ಆತಂಕಗೊಂಡು ಮಳಿಗೆಯಿಂದ ಹೊರ ಬಂದು ನೋಡಿದಾಗ ವಕೀಲರೊಬ್ಬರ ಕಚೇರಿಯಲ್ಲಿ ಬೆಂಕಿ ಹೊತ್ತಿಕೊಂಡು ಒಳಗೆ ಸಿಲುಕಿದ್ದವರು ನೆರವಿಗೆ ಕೂಗಿಕೊಳ್ಳುತ್ತಿದ್ದುದು ಕೇಳಿಸಿತು. ನಂತರ ಮೂರ್‌್ನಾಲ್ಕು ಮಂದಿ ಒಟ್ಟಾಗಿ ಕಟ್ಟಡದಿಂದ ಕೆಳಗಿಳಿದು ಬರಲು ಮುಂದಾದೆವು. ಆದರೆ, ಮೆಟ್ಟಿಲುಗಳ ಬಳಿಯೇ ಬೆಂಕಿಯ ಜ್ವಾಲೆ ವ್ಯಾಪಿಸಿದ್ದರಿಂದ ಸಾಧ್ಯವಾಗದೆ ಮಹಡಿಗೆ ಹೋದೆವು
–ಅಹಮ್ಮದ್, ಘಟನೆಯಲ್ಲಿ ಪಾರಾಗಿ ಬಂದವರು
ನಾಲ್ಕನೆ ಬಾರಿ
ಕಟ್ಟಡದಲ್ಲಿ ಕಳೆದ ಮೂರು ತಿಂಗಳಲ್ಲಿ ನಾಲ್ಕು ಬಾರಿ ಅಗ್ನಿ ಅನಾಹುತ ಸಂಭವಿಸಿದೆ. ಈ ಹಿಂದಿನ ಅನಾಹುತಗಳಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಅಗ್ನಿ ಅವಘಡಗಳು ಮರುಕಳಿಸುತ್ತಿದ್ದರೂ ಕಟ್ಟಡದ ಮಾಲೀಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣದಿಂದಲೇ ಇಬ್ಬರು ಸಾವನ್ನಪ್ಪಿದ್ದಾರೆ.
–ರಮೇಶ್, ಕಟ್ಟಡದ ಭದ್ರತಾ ಸಿಬ್ಬಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.