ಬೆಂಗಳೂರು: ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಮಗದಂ ಆನಂದ ಕುಮಾರ್ ಅಪ್ಪು ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ.
ಭಾನುವಾರ ನಡೆದ ಸಭೆಯಲ್ಲಿ ಪರಿಷತ್ತಿನ ಒಟ್ಟು 25 ಸದಸ್ಯರ ಪೈಕಿ 14 ಮಂದಿ ಮಗದಂ ಅವರ ವಿರುದ್ಧ ಮತ ಚಲಾಯಿಸಿದರು. ಈ ಕಾರಣಕ್ಕೆ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು.
`ಪರಿಷತ್ತಿನ ನಿಯಮದ ಪ್ರಕಾರ ಕೊನೆಯ ಪಕ್ಷ ಎರಡು ತಿಂಗಳಿಗೆ ಒಮ್ಮೆ ಸಭೆ ಕರೆಯಬೇಕು. ಆದರೆ ಅವರು ಆ ಪ್ರಕಾರ ಒಂದೇ ಒಂದು ಸಭೆ ಕರೆಯಲಿಲ್ಲ. ಈ ಬಗ್ಗೆ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ~ ಎಂದು ಸದಸ್ಯರು ಅವಿಶ್ವಾಸ ಗೊತ್ತುವಳಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
`ನ್ಯಾಯಮೂರ್ತಿ ಜೆ.ಎಸ್.ಕೇಹರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಗದಂ ಅವರಿಗೆ ಸರಿಯಾಗಿ ಇಂಗ್ಲಿಷ್‌ನಲ್ಲಿದ್ದ ಬೀಳ್ಕೊಡುಗೆ ಭಾಷಣ ಓದಲು ಆಗಲಿಲ್ಲ. ಇಂತಹವರು ಪರಿಷತ್ತಿನ ಅಧ್ಯಕ್ಷರಾಗಿ ಇರುವುದು ಬೇಡ~ ಎಂದು ಸದಸ್ಯರು ಗೊತ್ತುವಳಿಯಲ್ಲಿ ಉಲ್ಲೇಖಿಸಿದ್ದಾರೆ.
ಪರಿಷತ್ತಿನ 51 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷರೊಬ್ಬರನ್ನು ಈ ರೀತಿ ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಳಿಸಿದ್ದು ಇದೇ ಪ್ರಥಮ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.