ADVERTISEMENT

ವಚನಕಾರರನ್ನು ಬಸವಣ್ಣ ನ ನೆರಳಲ್ಲೇ ನೋಡದಿರಿ

ಅಂಬಿಗರ ಚೌಡಯ್ಯ ಜಯಂತಿ: ಸಾಹಿತಿ ಪುಸ್ತಕಮನೆ ಹರಿಪ್ರಿಯ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಜನವರಿ 2014, 20:04 IST
Last Updated 21 ಜನವರಿ 2014, 20:04 IST
ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಲೇಖಕರಾದ ಪ್ರೊ.ಜಿ.ಅಶ್ವತ್ಥನಾರಾಯಣ, ಪುಸ್ತಕಮನೆ ಹರಿಹರಪ್ರಿಯ, ಡಾ.ಪಿ.ವಿ.ನಾರಾಯಣ, ಡಾ.ಟಿ.ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಟಿ.ಮುನಿರಾಜಯ್ಯ ಮತ್ತಿತರರು ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಲೇಖಕರಾದ ಪ್ರೊ.ಜಿ.ಅಶ್ವತ್ಥನಾರಾಯಣ, ಪುಸ್ತಕಮನೆ ಹರಿಹರಪ್ರಿಯ, ಡಾ.ಪಿ.ವಿ.ನಾರಾಯಣ, ಡಾ.ಟಿ.ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಿ.ಟಿ.ಮುನಿರಾಜಯ್ಯ ಮತ್ತಿತರರು ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಬೆಂಗಳೂರು: ‘ತನ್ನ ಕಾಲದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ವಿರೋಧ ಪಕ್ಷದಂತೆ ದನಿ ಎತ್ತಿದ ವಚನಕಾರ ಅಂಬಿಗರ ಚೌಡಯ್ಯ’ ಸಾಹಿತಿ ಡಾ.ಪಿ.ವಿ.­ನಾರಾಯಣ ಹೇಳಿದರು.

ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ವೈದಿಕ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆ ವಚನ ಚಳವಳಿ. ತಳ ಸಮುದಾಯದ ಜನ ತಮ್ಮ ಅಭಿ­-ಪ್ರಾಯ­ಗಳನ್ನು ಹೇಳಿಕೊಳ್ಳುವ ಅವ­ಕಾಶ ಸಿಕ್ಕಿದ್ದು 12ನೇ ಶತಮಾನ­ದಲ್ಲಿ. ಆ ಕಾಲದಲ್ಲಿ ತನಗನಿಸಿದ್ದನ್ನು ನೇರವಾಗಿ ಹೇಳಿದವನು ಅಂಬಿಗರ ಚೌಡಯ್ಯ’ ಎಂದು ಅವರು ಅಭಿಪ್ರಾಯ­ಪಟ್ಟರು.

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ, ‘ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಉರಿಲಿಂಗ ಪೆದ್ದಿ ಮತ್ತಿತರ ವಚನಕಾರರು ಕಠಿಣ ಭಾಷೆ ಬಳಸಿ ಸಮಾಜದ ಡೊಂಕು­ಗಳನ್ನು ಟೀಕಿಸಿದವರು’ ಎಂದರು.

‘ಬಸವಣ್ಣ, ಅಲ್ಲಮಪ್ರಭು, ಅಕ್ಕ­ಮಹಾ­ದೇವಿ, ಸಿದ್ಧರಾಮ ಮೊದಲಾದ ವಚನಕಾರರನ್ನು ಮಾತ್ರ ಶ್ರೇಷ್ಠರೆಂದು ಭಾವಿಸುವುದು ಸರಿಯಲ್ಲ. ತಳ ಸಮು­ದಾಯದ ವಚನಕಾರರ ಬಗ್ಗೆಯೂ ಪ್ರತ್ಯೇಕವಾದ ಅಧ್ಯಯನ ನಡೆಯ­ಬೇಕು. ಬಸವಣ್ಣನ ನೆರಳಿನಲ್ಲಿ ಇತರೆ ವಚನಕಾರರನ್ನು ನೋಡುವ ಮನೋ­ಭಾವ ತಪ್ಪಬೇಕು. ವಚನ­ಕಾರರ ಬಗ್ಗೆ ವಸ್ತುನಿಷ್ಠ ವಿಮರ್ಶೆ ನಡೆಯಬೇಕು’ ಎಂದು ಹೇಳಿದರು.

ಲೇಖಕ ಪ್ರೊ.ಶಿವರಾಮಯ್ಯ ಮಾತ­ನಾಡಿ, ‘ನೇರ ಮಾತಿನ ವಚನಕಾರ ಅಂಬಿಗರ ಚೌಡಯ್ಯ. ಆಡಂಬರದ ಜರತಾರಿ ಜಗದ್ಗುರುಗಳ ಬಗ್ಗೆ ಕಠಿಣ ಮಾತುಗಳನ್ನಾಡುವ ಆತ ಭಂಡ ಭಕ್ತರನ್ನು ಟೀಕಿಸುತ್ತಾನೆ. ಆತನ ವಚನಗಳಲ್ಲಿ ಆಂತರಿಕ ಹಾಗೂ ಬಾಹ್ಯ ಪರಿಸರವನ್ನು ಸ್ವಚ್ಛವಾಗಿಟ್ಟು­ಕೊಳ್ಳುವ ಕಾಳಜಿ ಕಾಣುತ್ತದೆ’ ಎಂದರು.

ಲೇಖಕ ಡಾ.ಟಿ.ಗೋವಿಂದರಾಜು, ‘ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸಿ ಹಣ ಮಾಡಿ­ಕೊಳ್ಳು­ವವರು ಹಿಂದೆಯೂ ಇದ್ದರು, ಇಂದಿಗೂ ಇದ್ದಾರೆ. ಧರ್ಮದ ಹೆಸರಿನ ಡಾಂಬಿಕ ಆಚರಣೆಗಳನ್ನು ಅಂಬಿಗರ ಚೌಡಯ್ಯ ತನ್ನ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾನೆ’ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಜನಪದ ಕಲಾತಂಡಗಳಿಂದ ಜನಪದ ಕಲಾ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.