ADVERTISEMENT

ವಯಡಕ್ಟ್‌ ಸೆಗ್ಮೆಂಟ್‌ ಜೋಡಣೆ ಪ್ರಗತಿಯಲ್ಲಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2017, 20:27 IST
Last Updated 4 ಜೂನ್ 2017, 20:27 IST
ನಾಯಂಡಹಳ್ಳಿ ಬಳಿ ಮೆಟ್ರೊ ಮಾರ್ಗದ ವಯಡಕ್ಟ್‌ ಸೆಗ್ಮೆಂಟ್‌ಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ  – ಪ್ರಜಾವಾಣಿ ಚಿತ್ರ/ ಆನಂದ ಬಕ್ಷಿ
ನಾಯಂಡಹಳ್ಳಿ ಬಳಿ ಮೆಟ್ರೊ ಮಾರ್ಗದ ವಯಡಕ್ಟ್‌ ಸೆಗ್ಮೆಂಟ್‌ಗಳನ್ನು ಜೋಡಿಸುವ ಕಾರ್ಯ ನಡೆಯುತ್ತಿದೆ – ಪ್ರಜಾವಾಣಿ ಚಿತ್ರ/ ಆನಂದ ಬಕ್ಷಿ   

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ರೀಚ್‌ 2ಎ ಮಾರ್ಗದಲ್ಲಿ ವಯಡಕ್ಟ್‌ ಸೆಗ್‌ಮೆಂಟ್‌ಗಳನ್ನು ಜೋಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ನಿಲ್ದಾಣ ಕಾಮಗಾರಿ: ಈ ಮಾರ್ಗದ  ನಾಲ್ಕು ನಿಲ್ದಾಣಗಳಲ್ಲೂ ತಳಪಾಯದ (ಪೈಲಿಂಗ್‌ , ಪೈಲ್‌ ಕ್ಯಾಪ್‌ ನಿರ್ಮಿಸುವುದು) ಕಾಮಗಾರಿ ಪೂರ್ಣಗೊಂಡಿದೆ. ನಾಲ್ಕು ನಿಲ್ದಾಣಗಳಲ್ಲೂ ಕಾನ್‌ಕೋರ್ಸ್‌ ಮಟ್ಟದವರೆಗೆ ಕಾಂಕ್ರೀಟ್‌ ಕಂಬಗಳನ್ನು  (ಕಾಲಂ) ನಿರ್ಮಿಸುವ ಕೆಲಸ ಪೂರ್ಣಗೊಳ್ಳುವ ಹಂತದಲ್ಲಿದೆ.

ಜ್ಞಾನಭಾರತಿ ನಿಲ್ದಾಣದಲ್ಲಿ ಕಾನ್‌ಕೋರ್ಸ್‌ನಿಂದ ಪ್ಲ್ಯಾಟ್‌ಫಾರ್ಮ್‌ ಮಟ್ಟದವರೆಗೆ  ಕಾಂಕ್ರೀಟ್‌ ಕಂಬಗಳನ್ನು (ಕಾಲಂ) ನಿರ್ಮಿಸುವ ಹಾಗೂ ಪೋರ್ಟಲ್‌ ಬೀಮ್‌ಗಳನ್ನು ಅಳವಡಿಸುವ ಕಾಮಗಾರಿ ನಡೆಯುತ್ತಿದೆ.

ADVERTISEMENT

ಉಳಿದ ಕಡೆ ಪೈಲಿಂಗ್‌ ಹಾಗೂ ನೆಲದ ಮೇಲಿನ ಕಾಂಕ್ರೀಟ್‌ ಕಂಬ ಹಾಗೂ ಪಿಯರ್‌ ಕ್ಯಾಪ್‌ಗಳನ್ನು ಅಳವಡಿಸುವ ಕಾಮಗಾರಿ  ಪ್ರಗತಿಯಲ್ಲಿದೆ.

ಕಾಸ್ಟಿಂಗ್‌ ಯಾರ್ಡ್‌ನಲ್ಲಿ ವಯಡಕ್ಟ್‌ ಸೆಗ್‌ಮೆಂಟ್‌, ಗರ್ಡರ್‌ ನಿರ್ಮಾಣವೂ ಪ್ರಗತಿಯಲ್ಲಿದ್ದು, ಒಟ್ಟು 130 ಸೆಗ್‌ಮೆಂಟ್‌ಗಳು ಈಗಾಗಲೇ  ಸಿದ್ಧವಾಗಿವೆ.

ಐ.ಎಲ್‌. ಆ್ಯಂಡ್‌ ಎಫ್‌ಎಸ್‌ ಎಂಜಿನಿಯರಿಂಗ್‌ ಕನ್‌ಸ್ಟ್ರಕ್ಷನ್ಸ್‌ ಕಂಪೆನಿ ಈ ಕಾಮಗಾರಿಯ ಗುತ್ತಿಗೆ ಪಡೆದಿದೆ. 

ರೀಚ್‌ 2ಎ ಕಾಮಗಾರಿ ನಡೆಯುವ ಪ್ರದೇಶದಲ್ಲಿ ನೀರು ಸರಬರಾಜು ಹಾಗೂ ಒಳಚರಂಡಿ ಕೊಳವೆಗಳ ಸ್ಥಳಾಂತರದ ವೆಚ್ಚವನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು ಜಲಮಂಡಳಿಗೆ ಈಗಾಗಲೇ ಪಾವತಿಸಿದೆ.   ಜ್ಞಾನಭಾರತಿ, ರಾಜರಾಜೇಶ್ವರಿ ನಗರ ಹಾಗೂ ನಾಯಂಡಹಳ್ಳಿ ನಿಲ್ದಾಣಗಳಲ್ಲಿ ಅಗತ್ಯ ಕೊಳವೆ ಮಾರ್ಗಗಳ ಸ್ಥಳಾಂತರ ಕಾರ್ಯ ಪೂರ್ಣಗೊಂಡಿದೆ.

ರೀಚ್‌ 2ಬಿ ಕಾಮಗಾರಿಗೆ ಪೂರ್ವಸಿದ್ಧತೆ: ರೀಚ್‌ 2ಬಿ ಮಾರ್ಗದ  (ಪಟ್ಟಣಗೆರೆ ನಿಲ್ದಾಣದಿಂದ ಚಲ್ಲಘಟ್ಟ ಡಿಪೊವರೆಗೆ)  ಕಾಮಗಾರಿಗೂ ಪೂರ್ವಸಿದ್ಧತೆ ಆರಂಭವಾಗಿದೆ. ರಸ್ತೆಗೆ ಅಡ್ಡಗಟ್ಟುಗಳನ್ನು ಜೋಡಿಸಲಾಗುತ್ತಿದೆ.   

ಕೆಂಗೇರಿ ಕಮಾನು ಸೇತುವೆವರೆಗೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ  ನೆಲಸಮಗೊಳ್ಳಲಿರುವ ಕಟ್ಟಡಗಳ ಸಮೀಕ್ಷೆ  ಮುಗಿದಿದೆ.  ಇಲ್ಲಿನ   ಕೆಂಗೇರಿ ಕಮಾನಿನಿಂದ ಚಲ್ಲಘಟ್ಟದವರೆಗಿನ ಸ್ವತ್ತುಗಳ ಸ್ವಾಧೀನ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ.

4.867 ಕಿ.ಮೀ ಉದ್ದದ ಈ ಮಾರ್ಗಕ್ಕೆ ₹332 ಕೋಟಿ ವೆಚ್ಚವಾಗಲಿದೆ.  ಈ  ಕಾಮಗಾರಿಯನ್ನು ಸೋಮ ಎಂಟರ್‌ಪ್ರೈಸಸ್‌ ಕಂಪೆನಿಗೆ ವಹಿಸಲಾಗಿದೆ. ಈ ಮಾರ್ಗದಲ್ಲಿ ಕೆಂಗೇರಿ ಹಾಗೂ ಮೈಲಸಂದ್ರದಲ್ಲಿ ನಿಲ್ದಾಣಗಳು ನಿರ್ಮಾಣವಾಗಲಿವೆ.

ಅಂಕಿ-ಅಂಶ

₹327
ರೀಚ್‌ 2ಎ ಯೋಜನಾ  ವೆಚ್ಚ

3.94
ರೀಚ್‌ 2ಎ ಮಾರ್ಗದ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.