ADVERTISEMENT

ವರದಕ್ಷಿಣೆ: ಉದ್ಯಮಿ ಮಗ ಸೆರೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಬೆಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗಾರಿಕೋದ್ಯಮಿಯೊಬ್ಬರ ಮಗನನ್ನು ಸುಬ್ರಹ್ಮಣ್ಯನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

 ಚಿಕ್ಕಬಿದರಕಲ್ಲು ಬಳಿಯ ರವಿ ಕಿರ್ಲೋಸ್ಕರ್ ಲೇಔಟ್ ವಾಸಿ ಕೆ.ಕೆ.ರಾಮಕೃಷ್ಣ ಎಂಬುವರ ಪುತ್ರ ಗಿರೀಶ್‌ಗೌಡ ಬಂಧಿತರು. ಅವರ ಪತ್ನಿ ಟಿ.ಅಶ್ವಿನಿ ಅವರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರೆಂದು ಪೊಲೀಸರು ಹೇಳಿದ್ದಾರೆ.

ರಾಮಕೃಷ್ಣ ಪ್ಲೈವುಡ್ ಕಾರ್ಖಾನೆಯ ಮಾಲೀಕರು. ಅಶ್ವಿನಿ ತಂದೆ ತುಳಸಿರಾಮಗೌಡ ಅವರು ಲೇವಾದೇವಿ ವ್ಯವಹಾರ ಮಾಡುತ್ತಾರೆ. ನಗರದ ಅರಮನೆ ಮೈದಾನದಲ್ಲಿ 2011ರ ಮೇ 22ರಂದು ಗಿರೀಶ್‌ಗೌಡ ಅವರ ವಿವಾಹವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಪತಿ ಗಿರೀಶ್‌ಗೌಡ, ಮಾವ ರಾಮಕೃಷ್ಣ, ಅತ್ತೆಯರಾದ ಕೋಮಲಾ ಮತ್ತು ಸುನಂದಾ ಅವರು ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದರು. ಮದುವೆಯ ಸಂದರ್ಭದಲ್ಲಿ ಎರಡು ಕೆ.ಜಿ ಚಿನ್ನಾಭರಣ, ಮೂರು ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ 65 ಲಕ್ಷ ರೂಪಾಯಿ ಮೌಲ್ಯ ಮರ್ಸಿಡಿಸ್ ಬೆಂಜ್ ಕಾರನ್ನು ವರದಕ್ಷಿಣೆಯಾಗಿ ಕೊಡಲಾಗಿತ್ತು. ಪತಿ ಪ್ರತಿನಿತ್ಯ ಪಾನಮತ್ತರಾಗಿ ಬಂದು, ತಂದೆ ಬಳಿ ಹಣ ಕೇಳುವಂತೆ ಪೀಡಿಸುತ್ತಿದ್ದರು. ಅಲ್ಲದೇ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದರು. ಮಾವ ರಾಮಕೃಷ್ಣ ಅವರು ಸಹ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು~ ಎಂದು ಅಶ್ವಿನಿ ದೂರಿನಲ್ಲಿ ತಿಳಿಸಿದ್ದಾರೆ.

ಗಿರೀಶ್‌ಗೌಡ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ರಾಮಕೃಷ್ಣ ಮತ್ತು ಅವರ ಪತ್ನಿಯರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.