ಬೆಂಗಳೂರು: ಕೌಟುಂಬಿಕ ಹಿಂಸೆ ಅಥವಾ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಪತ್ನಿಯು ಪತಿಯ ವಿರುದ್ಧ ಸುಳ್ಳು ದೂರು ದಾಖಲಿಸುವ ಪ್ರಕರಣಗಳಲ್ಲಿ ಸತ್ಯಾಸತ್ಯತೆ ಪರಿಶೀಲಿಸಿದ ನಂತರವೇ ಸೂಕ್ತ ನಿರ್ಧಾರಕ್ಕೆ ಬರಬೇಕು.
ಇಂತಹ ಪ್ರಕರಣಗಳಲ್ಲಿ ಅತ್ತೆ-ಮಾವಂದಿರನ್ನು ಬೀದಿಗೆ ತಳ್ಳಲು ಅವಕಾಶ ನೀಡದೆ ಸರ್ಕಾರ ರಕ್ಷಣೆಗೆ ಬರಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಅತ್ತೆಯರ ಸಂಘವು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವಾದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಚೌಡಯ್ಯ ಸ್ಮಾರಕ ಭವನದ ಬಳಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ ಫಲಕಗಳನ್ನು ಹಿಡಿದು ಶಾಂತಿಯುತ ಪ್ರತಿಭಟನೆ ನಡೆಸಿದ ಸಂಘದ ಸದಸ್ಯರು, ಆ ಮೂಲಕ ಸರ್ಕಾರದ ಗಮನಸೆಳೆದರು. ಈ ನಡುವೆ, ಮುಖ್ಯಮಂತ್ರಿಗಳು ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ತಮ್ಮ ನಿವಾಸದಲ್ಲಿ ಭೇಟಿ ಮಾಡಲು ಅವಕಾಶ ನೀಡಿದ್ದಾರೆ ಎಂದು ಸಂಘದ ಕಾರ್ಯದರ್ಶಿ ರಾಣಿ ನಾಗರಾಜ್ ತಿಳಿಸಿದರು.
`ದುಡ್ಡು ಹಾಗೂ ಆಸ್ತಿಯ ಮೇಲೆ ಕಣ್ಣಿಟ್ಟ ಸೊಸೆಯರು ಇಂದು ವಿನಾಕಾರಣ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಅತ್ತೆ-ಮಾವಂದಿರು, ಅತ್ತಿಗೆ, ಮೈದುನ ಸೇರಿದಂತೆ ಇಡೀ ಕುಟುಂಬದ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ನೀಡಿ ಜೈಲಿಗೆ ಕಳಿಸುತ್ತಿದ್ದಾರೆ ಎಂದರು.ಇದರಿಂದ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತಿದೆ~ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.