ಬೆಂಗಳೂರು: ಅಗ್ನಿಶಾಮಕದಳದ ಸಿಬ್ಬಂದಿಯೊಬ್ಬರ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಸಮೀಪದ ಬೈರಸಂದ್ರದಲ್ಲಿ ಶುಕ್ರವಾರ ನಡೆದಿದೆ.
`ನಗರದ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಸಿಬ್ಬಂದಿಯಾದ ಮಂಜುನಾಥ ಅವರ ಪತ್ನಿ ಶಿಲ್ಪಾ(20) ಆತ್ಮಹತ್ಯೆ ಮಾಡಿಕೊಂಡವರು. ಅವರ ವಿವಾಹವಾಗಿ ಒಂದು ವರ್ಷವಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಶಿಲ್ಪಾ ಅವರ ತಂದೆ ಬಾಲಕೃಷ್ಣ ಹಾಗೂ ತಾಯಿ ಪ್ರಭಾ ಜೆ.ಪಿ. ನಗರದಲ್ಲಿ ವಾಸಿಸುತ್ತಿದ್ದಾರೆ~ ಎಂದು ಸಿದ್ದಾಪುರ ಠಾಣೆಯ ಇನ್‌ಸ್ಪೆಕ್ಟರ್ ಸಿ.ಆರ್.ರವಿಶಂಕರ್ ತಿಳಿಸಿದರು.
`ಮಂಜುನಾಥ ಹಾಗೂ ಆತನ ತಾಯಿ ಪುಷ್ಪಾ ನನ್ನ ಮಗಳಿಗೆ ಐದು ಲಕ್ಷ ರೂಪಾಯಿ ಹಣ ತರುವಂತೆ ಕಿರುಕುಳ ನೀಡುತ್ತಿದ್ದರು. ನನ್ನ ಮಗಳನ್ನು ಅವರೇ ಕೊಲೆ ಮಾಡಿ ಆತ್ಮಹತ್ಯೆ ಎಂದು ನಾಟಕವಾಡುತ್ತಿದ್ದಾರೆ~ ಎಂದು ಶಿಲ್ಪಾ ಪೋಷಕರು ದೂರಿದ್ದಾರೆ.
ಪುಷ್ಪಾ ಅವರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶೀಘ್ರಲಿಪಿಗಾರರಾಗಿ (ಟೈಪಿಸ್ಟ್) ಕೆಲಸ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು.
ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಮಂಜುನಾಥ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.