ADVERTISEMENT

ವರುಣಾ, ಚಾಮುಂಡೇಶ್ವರಿ ನನ್ನ ಕಣ್ಣುಗಳಿದ್ದಂತೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಮೈಸೂರು ಜಿಲ್ಲೆ ಚಾಮುಂಡೇಶ್ವರಿ ಕ್ಷೇತ್ರದ ಲಿಂಗಾಯತ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಮ್ಮ ಕ್ಷೇತ್ರದಲ್ಲೇ ಮುಂದಿನ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದರು
ಮೈಸೂರು ಜಿಲ್ಲೆ ಚಾಮುಂಡೇಶ್ವರಿ ಕ್ಷೇತ್ರದ ಲಿಂಗಾಯತ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಮ್ಮ ಕ್ಷೇತ್ರದಲ್ಲೇ ಮುಂದಿನ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದರು   

ಬೆಂಗಳೂರು: ‘ನನ್ನನ್ನು ರಾಜಕೀಯವಾಗಿ ಬೆಳೆಸಿದ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳು ನನ್ನ ಎರಡು ಕಣ್ಣುಗಳಿದ್ದಂತೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕವಾಗಿ ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಲು ಗೃಹ ಕಚೇರಿ ಕೃಷ್ಣಾಕ್ಕೆ ಶುಕ್ರವಾರ ಬಂದಿದ್ದ ಲಿಂಗಾಯತ ಸಮುದಾಯದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಎರಡೂ ಕ್ಷೇತ್ರಗಳ ಋಣ ನನ್ನ ಮೇಲಿದೆ. ಮಾದರಿ ಕ್ಷೇತ್ರಗಳನ್ನಾಗಿ ಇವುಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಯೋಜನೆ ರೂಪಿಸಿ, ಅಗತ್ಯ ಅನುದಾನ ನೀಡಲಾಗಿದೆ’ ಎಂದರು.

‘ಉಪ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ನನ್ನ ಮೇಲೆ ಪ್ರೀತಿಯಿಟ್ಟು ಗೆಲ್ಲಿಸದಿದ್ದರೆ ರಾಜಕಾರಣದಿಂದಲೇ ನಾನು ದೂರ ಹೋಗಿ ಬಿಡುತ್ತಿದ್ದೆ. ಕಷ್ಟ ಕಾಲದಲ್ಲಿ ನನ್ನ ಕೈಹಿಡಿದು, ರಾಜಕೀಯ ಮರುಜನ್ಮ ನೀಡಿದ ಈ ಕ್ಷೇತ್ರದ ಜನರ ಋಣವನ್ನು ಯಾವತ್ತಿಗೂ ಮರೆಯಲಾರೆ’ ಎಂದು ಹೇಳಿದರು.

ADVERTISEMENT

‘2018ರ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಈಗಾಗಲೇ ಹೇಳಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಪ್ರೀತಿಯಿಂದ ಒತ್ತಾಯ ಮಾಡುತ್ತಿದ್ದೀರಿ. ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಎರಡೂ ಕ್ಷೇತ್ರಗಳ ಋಣ ತೀರಿಸಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದರು.

ಮಾಜಿ ಶಾಸಕ ಸತ್ಯನಾರಾಯಣ, ವರುಣಾ ವಿಧಾನಸಭೆ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಮರಿಗೌಡ, ಮಾರ್ಬಳ್ಳಿ ಕುಮಾರ, ನಾಗರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.