ಬೆಂಗಳೂರು: ‘ಶಿಕ್ಷಣದಲ್ಲಿ ನಾವು ಪ್ರಗತಿ ಸಾಧಿಸುತ್ತಿದ್ದರೂ ಪರಿಸರ ಪ್ರಜ್ಞೆಯಲ್ಲಿ ಬಹಳ ಹಿಂದಿದ್ದೇವೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ‘ಪರಿಸರ ಮಿತ್ರ ಶಾಲೆ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕಳೆದ ಸೆಪ್ಟಂಬರ್‌ನಲ್ಲಿ ಆರಂಭವಾಗಿದ್ದ ಪರಿಸರ ಮಿತ್ರ ಶಾಲೆ ಕಾರ್ಯಕ್ರಮದಲ್ಲಿ ನಗರ ಮತ್ತು ನಗರದ ಹೊರವಲಯದ 135 ಶಾಲೆಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಮತ್ತು ಶಾಲಾ ವಾತಾವರಣವನ್ನು ಪರಿಸರ ಸ್ನೇಹಿಯಾಗಿಸುವ ಸ್ಪರ್ಧೆಯ ಅಂತಿಮ ಸುತ್ತಿಗೆ ಬಂದಿದ್ದ 30 ಶಾಲೆಗಳಲ್ಲಿ 21 ಶಾಲೆಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
ವರ್ತೂರಿನ ಕೆ.ಕೆ.ಆಂಗ್ಲ ಶಾಲೆ ರೂ. 20 ಸಾವಿರ ನಗದನ್ನು ಒಳಗೊಂಡ ‘ಪರಿಸರ ಮಿತ್ರ ಶಾಲೆ’ ಪ್ರಶಸ್ತಿಗೆ ಪಾತ್ರವಾಗಿದೆ. ಬೆಟ್ಟಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕುಮಾರಸ್ವಾಮಿ ಬಡಾವಣೆಯ ವಿದಾತ ಹಿರಿಯ ಪ್ರಾಥಮಿಕ ಶಾಲೆಗಳು ಕ್ರಮವಾಗಿ 2 ಮತ್ತು 3 ನೇ ಸ್ಥಾನಕ್ಕೆ ಆಯ್ಕೆಯಾಗಿವೆ. ಈ ಶಾಲೆಗಳೂ ಸೇರಿದಂತೆ 10 ಶಾಲೆಗಳಿಗೆ ‘ಹಸಿರು ಶಾಲೆ’ ಪ್ರಶಸ್ತಿ ಮತ್ತು ರೂ. 2 ಸಾವಿರ ನಗದು ಬಹುಮಾನ ನೀಡಲಾಯಿತು. 10 ಶಾಲೆಗಳಿಗೆ ‘ಕಿತ್ತಳೆ ಶಾಲೆ’ ಮತ್ತು ರೂ. 1 ಸಾವಿರ ನಗದು ಪುರಸ್ಕಾರ ನೀಡಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಸಿನ್, ‘ನನಸಾದ ಕನಸು’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ‘ಗ್ರೀನ್ ವಿಕೆಟ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗ್ರೀನ್ ವಿಕೆಟ್‌ನ ಸಂಚಾಲಕಿ ಮತ್ತು ಪರಿಸರ ಅಧಿಕಾರಿ ವಿಜಿ ಕಾರ್ತಿಕೇಯನ್ ಮಾತನಾಡಿ, ‘ನಗರದ ಕ್ರೀಡಾಂಗಣಗಳನ್ನು ಹೆಚ್ಚು ಪರಿಸರ ಸ್ನೇಹಿಯಾಗಿಸುವ ಕಾರ್ಯಕ್ರಮವಿದು. ಕ್ರಿಕೆಟಿಗರು, ಕ್ರೀಡಾಪಟುಗಳು ಕಾರ್ಯಕ್ರಮದ ಸಲಹಾ ಮಂಡಳಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಗ್ರೀನ್ ವಿಕೆಟ್ ಅನ್ನು ರಾಜ್ಯದ 8 ಜಿಲ್ಲೆಗಳ ಶಾಲೆಗಳಿಗೆ ವಿಸ್ತರಿಸಲಾಗುವುದು’ ಎಂದು ಹೇಳಿದರು.
‘ಮಳೆ ನೀರು ಸಂಗ್ರಹಣೆ, ಸೋಲಾರ್ ವಿದ್ಯುತ್ ಉತ್ಪಾದನೆ, ತ್ಯಾಜ್ಯ ಮತ್ತು ಬಳಸಿದ ನೀರಿನ ನಿರ್ವಹಣೆ ಮತ್ತು ಮರುಬಳಕೆಗೆ ಉತ್ತೇಜನ ನೀಡುವುದು ಕಾರ್ಯಕ್ರಮದ ಉದ್ದೇಶ’ ಎಂದರು. ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಜಿ.ಎನ್. ಜನಾರ್ಧನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.