ADVERTISEMENT

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹಸ್ತಕ್ಷೇಪವಿಲ್ಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಬೆಂಗಳೂರು: ರಾಜ್ಯದ ಬೊಕ್ಕಸ ತುಂಬಿಸುವಲ್ಲಿ ಮಹತ್ವದ ಪಾತ್ರ ನಿರ್ವವಹಿಸುತ್ತಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಾರ್ಯ ನಿರ್ವ ಹಣೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬುಧವಾರ ಇಲ್ಲಿ ಭರವಸೆ ನೀಡಿದರು.

ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ ಅಧಿಕಾರಿಗಳ ಸಂಘ ನಾಗರಬಾವಿ ಬಡಾವಣೆಯ 10 ಬ್ಲಾಕ್, 2ನೇ ಹಂತದಲ್ಲಿ ನಿರ್ಮಿಸಿರುವ ತೆರಿಗೆ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ರಾಜ್ಯದ ಬೊಕ್ಕಸ ತುಂಬಿಸಲು ಅತ್ಯಂತ ಯಶಸ್ವೀ ಕೆಲಸ ನಿರ್ವಹಿಸುತ್ತಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ಅನಗತ್ಯ ಹಸ್ತಕ್ಷೇಪ ಮಾಡಬಾರದು. ಇಲಾಖೆಯ ಆಯುಕ್ತರು ತಮ್ಮ ವಿವೇಚನೆಗೆ ಅನುಗುಣವಾಗಿ ಕೆಲಸ ಮಾಡಬಹುದು. ಪ್ರಮುಖ ಹುದ್ದೆಗಳ ವರ್ಗಾವಣೆ ವಿಷಯದಲ್ಲಿಯೂ ಸರ್ಕಾರ ಮೂಗು ತೂರಿಸುವುದಿಲ್ಲ~ ಎಂದು ಅಭಯ ನೀಡಿದರು.

`ರಾಜ್ಯದ ಆರ್ಥಿಕ ಶಿಸ್ತು ಹಾಗೂ ನಿರ್ವಹಣೆಗೆ ಆರ್‌ಬಿಐ ಮತ್ತು ವಿಶ್ವ ಬ್ಯಾಂಕ್‌ಗಳು ಕೂಡ ಶಹಭಾಷ್‌ಗಿರಿ ನೀಡಲು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಉತ್ತಮ ಸಹಕಾರ ಕೂಡ ಕಾರಣ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತೆರಿಗೆ ಸೋರಿಕೆ ತಡೆಗೆ ಕ್ರಮ: `ವ್ಯಾಪಾರಸ್ಥರು ತೆರಿಗೆ ಪಾವತಿಸಲು ಮುತುವರ್ಜಿ ವಹಿಸುತ್ತಿದ್ದರೂ ನಿರಂತರವಾಗಿ ತೆರಿಗೆ ಸೋರಿಕೆಯಾಗುತ್ತಿದೆ. ಇ-ಆಡಳಿತ ವ್ಯವಸ್ಥೆ ಜಾರಿಗೆ ಬಂದ ನಂತರವೂ ಸಾಕಷ್ಟು ತೆರಿಗೆ ಸೋರಿಕೆಯಾಗುತ್ತಿದೆ. ಪ್ರಮುಖವಾಗಿ ವೃತ್ತಿ ತೆರಿಗೆ ಹಾಗೂ ವಿಲಾಸಿ ತೆರಿಗೆ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು~ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಅಬಕಾರಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ನಡುವಿನ ವೇತನ ತಾರತಮ್ಯವನ್ನು ಸರಿಪಡಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ವಿ. ನಾಗರಾಜನ್ ಮಾತನಾಡಿ, ಕಳೆದ ವರ್ಷ 22 ಸಾವಿರ ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನು ವಾಣಿಜ್ಯ ಇಲಾಖೆಗೆ ನೀಡಲಾಗಿತ್ತು. ಆದರೆ, ಇಲಾಖೆಯು 23,266 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದೆ. ಈ ವರ್ಷ ಕೂಡ 26,700 ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿದ್ದು, ಖಂಡಿತಾ ವರ್ಷಾಂತ್ಯದೊಳಗೆ ನಿಗದಿತ ಗುರಿ ಸಾಧಿಸಲಾಗುವುದು ಎಂದರು.

ಸ್ವಾಗತಿಸಿದ ಸಂಘದ ಅಧ್ಯಕ್ಷ ಕೆ.ಎಸ್. ಬಸವರಾಜ್, ಅಬಕಾರಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ವೇತನ ತಾರತಮ್ಯ ಸರಿಪಡಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್, ಶಾಸಕ ಎಂ. ಶ್ರೀನಿವಾಸ್, ಬಿಬಿಎಂಪಿ ಸದಸ್ಯ ವೆಂಕಟೇಶಬಾಬು, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಪ್ರದೀಪ್‌ಸಿಂಗ್ ಖರೋಲ, ಹೆಚ್ಚುವರಿ ಆಯುಕ್ತ ಎಂ. ರಂಗಣ್ಣ, ಜಂಟಿ ಆಯುಕ್ತ ನಾಗರಾಜ ದೀಕ್ಷಿತ್, ಉಪ ಆಯುಕ್ತ ಡಾ. ಸಿದ್ದರಾಮಯ್ಯ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.