ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿಯಲ್ಲಿ ಹಿಂದುಳಿದ ಸಮುದಾಯದ ಮೂವರು ವಿದ್ಯಾರ್ಥಿಗಳಿಗೆ ನಗರದ ಮಾಚೋಹಳ್ಳಿಯ ವಾಣಿ ಶಾಲೆಯಲ್ಲಿ ಪ್ರವೇಶ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ.
`ಈ ಶಾಲೆಯಲ್ಲಿ ಸೇರ್ಪಡೆಯಾಗಲು ಮೂವರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಆಡಳಿತ ಮಂಡಳಿಯವರು ಶಾಲೆಯಲ್ಲಿ ಈ ಬಾರಿ ಪ್ರವೇಶ ನೀಡುವುದು ಅಸಾಧ್ಯ ಎಂಬುದಾಗಿ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಆಡಳಿತ ಮಂಡಳಿಯವರಿಗೆ ನೋಟಿಸ್ ನೀಡಿದ್ದಾರೆ~ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಆರ್‌ಟಿಇ ನೋಡೆಲ್ ಅಧಿಕಾರಿ ಜಯಸಿಂಹ `ಪ್ರಜಾವಾಣಿ~ಗೆ ಸೋಮವಾರ ತಿಳಿಸಿದರು.
`ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ವಾಣಿ ಶಾಲೆಯಲ್ಲಿ ಮಾತ್ರ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಉಳಿದಂತೆ ಯಾವುದೇ ದೂರುಗಳು ಇಲಾಖೆಗೆ ಬಂದಿಲ್ಲ. ಹಿಂದುಳಿದ ಸಮುದಾಯದ ಯಾವ ಯಾವ ಪಂಗಡದ ವಿದ್ಯಾರ್ಥಿಗಳು ಶಾಲೆಗಳಿಗೆ ಎಷ್ಟು ಮಂದಿ ಸೇರಿದ್ದಾರೆ ಎಂಬ ಮಾಹಿತಿ ಒಂದು ವಾರದಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಲಾಖೆಯ ವೆಬ್‌ಸೈಟ್‌ಗೆ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಿದ್ದಾರೆ~ ಎಂದು ಅವರು ಮಾಹಿತಿ ನೀಡಿದರು. `ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವ್ಯಾಪ್ತಿಯಲ್ಲಿ ಕೆಲವು ಶಾಲೆಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಂದ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದವು.
ಅರ್ಹ ಹಿಂದುಳಿದ ವಿದ್ಯಾರ್ಥಿಗಳು ಇದ್ದರೆ ಖಾಸಗಿ ಶಾಲೆಗಳಿಗೆ ಸೇರಿಸಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಲಾಗಿತ್ತು. ದೇವನಹಳ್ಳಿಯ ಖಾಸಗಿ ಶಾಲೆಯೊಂದಕ್ಕೆ ಇಬ್ಬರು ವಿದ್ಯಾರ್ಥಿಗಳು ಹಾಗೂ ಮತ್ತೊಂದು ಶಾಲೆಗೆ ಒಬ್ಬ ವಿದ್ಯಾರ್ಥಿಯನ್ನು ಸೇರಿಸಲಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ~ ಎಂದು ಗ್ರಾಮಾಂತರ ಜಿಲ್ಲೆಯ ಡಿಡಿಪಿಐ ಎಚ್.ವಿ.ವೆಂಕಟೇಶಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.