ADVERTISEMENT

ವಾರೆಂಟ್ ಜಾರಿಗೆ ವಿಫಲ: ಕಮಿಷನರ್‌ಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ನಿವೇಶನ ನೀಡುವುದಾಗಿ ನೂರಾರು ಜನರಿಗೆ ವಂಚನೆ ಮಾಡಿರುವ ಆರೋಪ ಹೊತ್ತ ನಗರದ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದ ಪದಾಧಿಕಾರಿಗಳಿಗೆ ಹಲವು ಬಾರಿ ಜಾರಿ ಮಾಡಿರುವ ಜಾಮೀನುರಹಿತ ವಾರೆಂಟ್ ಅನ್ನು ಅವರಿಗೆ ತಲುಪಿಸುವಲ್ಲಿ ವಿಫಲರಾಗಿರುವ ಪೊಲೀಸರ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಡಾ. ಆತ್ಮರಾಜನ್ ರೈ ಹಾಗೂ ಇತರರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ಅವರು ಸರ್ಕಾರ, ನಗರ ಪೊಲೀಸ್ ಕಮಿಷನರ್ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಬುಧವಾರ ಆದೇಶಿಸಿದ್ದಾರೆ.

ನಿವೇಶನ ಮಂಜೂರು ಮಾಡುವುದಾಗಿ ನಂಬಿಸಿ 1984ರಿಂದ 1994ರ ಅವಧಿಯ ನಡುವೆ ಲಕ್ಷಾಂತರ ರೂಪಾಯಿಗಳನ್ನು ಸೊಸೈಟಿ ಪಡೆದುಕೊಂಡಿದೆ. ನಿವೇಶನ ಮಂಜೂರು ಮಾಡದ ಕಾರಣ ಗ್ರಾಹಕರ ವೇದಿಕೆ ಮುಂದೆ ದೂರು ಸಲ್ಲಿಸಲಾಗಿತ್ತು.

ಈ ಸಂಬಂಧ ತಮ್ಮ ಪ್ರಕರಣ ಒಂದರಲ್ಲಿಯೇ ಸೊಸೈಟಿಯ ಪದಾಧಿಕಾರಿಗಳಿಗೆ 10 ಬಾರಿ ವಾರೆಂಟ್ ಜಾರಿ ಮಾಡಲಾಗಿತ್ತು. ಆದರೆ ಅದನ್ನು ತಲುಪಿಸಲು ಪೊಲೀಸರು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಆದೇಶಿಸಬೇಕು ಎನ್ನುವುದು ಅರ್ಜಿದಾರರ ದೂರು. ವಿಚಾರಣೆಯನ್ನು ಮುಂದೂಡಲಾಗಿದೆ.

ವಿಡಿಯೊ ಪ್ರದರ್ಶನ: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಕ್ಕೆ 2008ರಲ್ಲಿ ನಡೆದ ಚುನಾವಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಿಡಿಯೊ ಪ್ರದರ್ಶನ ನಡೆಸಲಾಯಿತು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಿದ್ದ ಕವಿತಾ ಮಹೇಶ್ ಅವರ ನಾಮಪತ್ರವನ್ನು ಪಡೆಯಲು ನಿರಾಕರಿಸಿದ್ದ ವಿವಾದ ಇದಾಗಿದೆ. ನಿಗದಿತ ಸಮಯದಲ್ಲಿ ತಾವು ನಾಮಪತ್ರ ಸಲ್ಲಿಸಿದ್ದರೂ ಸಮಯ ಮೀರಿ ಹೋಗಿದೆ ಎಂಬ ಕಾರಣ ನೀಡಿ ಅದನ್ನು ಸ್ವೀಕರಿಸಲಿಲ್ಲ ಎಂದು ದೂರಿ ಅದೇ ಸಾಲಿನಲ್ಲಿ ಅವರು ಅರ್ಜಿ ಸಲ್ಲಿಸಿದ್ದಾರೆ. ಖುದ್ದು ವಾದ ಮಂಡಿಸುತ್ತಿರುವ ಅವರು, ನಾಮಪತ್ರ ಸಲ್ಲಿಕೆ ಕುರಿತಾದ ಸಿ.ಡಿ.ಯನ್ನು ಕೋರ್ಟ್‌ಗೆ ನೀಡಿದರು.

`ಚಿತ್ರೀಕರಣ ಎಷ್ಟು ಅವಧಿಯವರೆಗೆ ಇದೆ~ ಎಂದು ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಪ್ರಶ್ನಿಸಿದರು. ಅದಕ್ಕೆ ಕವಿತಾ `ಒಂದು ಗಂಟೆ~ ಎಂದರು. ಆಗ ನ್ಯಾಯಮೂರ್ತಿಗಳು `ಅಷ್ಟು ದೀರ್ಘವೇ, ಕಾಮಿಡಿ ಸಿ.ಡಿಯಾಗಿದ್ದರೆ ನೋಡಬಹುದಿತ್ತು. ಇದು ನೋಡಿದರೆ `ಟ್ರ್ಯಾಜಡಿ~ (ದುಃಖದ್ದು). ಹೇಗೆ ನೋಡುದು ಎಂದು ಚಟಾಕಿ ಸಿಡಿಸಿದರು. ಸಿ.ಡಿ.ವೀಕ್ಷಿಸಿ ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.