ADVERTISEMENT

ವಿಜೃಂಭಣೆಯಿಂದ ನಡೆದ ಪಟಾಲಮ್ಮ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ಯಲಹಂಕ:  ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದಿಗಾನಹಳ್ಳಿ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನೆಲೆಸಿರುವ ಶ್ರೀ ಪಟಾಲಮ್ಮ ದೇವಿಯ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಬುಧವಾರ ಬೆಳಗ್ಗೆ 11 ಗಂಟೆಗೆ ಅದ್ದಿಗಾನಹಳ್ಳಿ, ಸಾದೇನಹಳ್ಳಿ ಹಾಗೂ ತರ ಹುಣಿಸೆ ಗ್ರಾಮಗಳಿಂದ ಹೊರಟ ಹೂವಿನ ಫಲ್ಲಕ್ಕಿಗಳಿಂದ ಅಲಂಕರಿಸಿದ ಗ್ರಾಮ ದೇವರುಗಳ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮಧ್ಯಾಹ್ನ ಒಂದು ಗಂಟೆಗೆ ಪಟಾಲಮ್ಮ ದೇವಸ್ಥಾನದ ಬಳಿ ಬಂದು ಸೇರಿದವು.

ಮಾರಗೊಂಡನಹಳ್ಳಿ, ಅಗ್ರಹಾರ, ತಿಮ್ಮಸಂದ್ರ, ನಾಗದಾಸನಹಳ್ಳಿ, ರಾಜಾನು ಕುಂಟೆ ಹಾಗೂ ಚೊಕ್ಕನಹಳ್ಳಿ ಗ್ರಾಮಗಳ ಪ್ರತಿ ಮನೆಗಳಿಂದ  ಮಹಿಳೆಯರು ತಂಬಿಟ್ಟು ಮತ್ತು ಬೆಲ್ಲದ ಆರತಿಯನ್ನು ಹೊತ್ತು ರಥೋತ್ಸವದಲ್ಲಿ ಸಾಗಿದರು. ನಂತರ ದೇವಿಗೆ ಆರತಿಯನ್ನು ಬೆಳಗಿ ತಮ್ಮ ಹರಕೆಯನ್ನು ತೀರಿಸಿದರು.  ಇದೇ ಸಂದರ್ಭದಲ್ಲಿ ಸಪಲಮ್ಮ, ಲಕ್ಷ್ಮೀದೇವಿ, ಹಸಿರುಗುಡಿ, ಗ್ರಾಮದಮ್ಮ ದೇವರುಗಳಿಗೆ ಆರತಿ ಬೆಳಗಿ ಪೂಜೆ ನೆರವೇರಿಸಲಾಯಿತು.
ಶಾಸಕ ಎಸ್.ಆರ್. ವಿಶ್ವನಾಥ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮೊದಲಾದವರು ಹಾಜರಿದ್ದರು.

ಶುಕ್ರವಾರ ಪಟಾಲಮ್ಮನವರ ಮೆರವಣಿಗೆ ದೇವಿಯನ್ನು ಅದ್ದಿಗಾನ ಹಳ್ಳಿಯಿಂದ ಮೆರವಣಿಗೆ ಮೂಲಕ ದೇವಿಯ ಸನ್ನಿ ಧಾನಕ್ಕೆ ತಂದು, ಒಂದು ವಾರಕಾಲ ಅಲ್ಲೆ ಪ್ರತಿಷ್ಠಾಪಿಸಲಾಗುವುದು. ಪ್ರತಿದಿನ ಒಂದೊಂದು ಗ್ರಾಮದಲ್ಲಿ ದೇವಿಯನ್ನು ಹೂವಿನ ಪಲ್ಲಕ್ಕಿಯ ರಥೋತ್ಸವದೊಂದಿಗೆ ಮೆರವಣಿಗೆ ನಡೆಸಿದ ನಂತರ ಮಂಗಳವಾರ ಮರಳಿ ಅರ್ಚಕರ ಮನೆಗೆ ತರಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.