ADVERTISEMENT

ವಿಜ್ಞಾನ ಮಾದರಿ: ಬೆಳ್ಕಿ ಶಾಲೆಗೆ ಪ್ರಶಸ್ತಿ

ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳ ಸಮಾರೋಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2016, 19:56 IST
Last Updated 23 ಜನವರಿ 2016, 19:56 IST
ಬಹುಮಾನ ಗಳಿಸಿದ ವಿದ್ಯಾರ್ಥಿಗಳು ಪರಸ್ಪರ ಹಸ್ತಲಾಘವ ಮಾಡಿದರು –ಪ್ರಜಾವಾಣಿ ಚಿತ್ರ
ಬಹುಮಾನ ಗಳಿಸಿದ ವಿದ್ಯಾರ್ಥಿಗಳು ಪರಸ್ಪರ ಹಸ್ತಲಾಘವ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೆಲವು ವರ್ಷಗಳಲ್ಲಿ ಖಗೋಳವಿಜ್ಞಾನ ಕ್ಷೇತ್ರದಲ್ಲಿ ಭಾರತ ಅದ್ಭುತ ಸಾಧನೆ ಮಾಡಿದ್ದು, ಕೆಲವೇ ವರ್ಷಗಳಲ್ಲಿ ದೇಶದಲ್ಲಿ ಸೋಲಾರ್‌ ಟೆಲಿಸ್ಕೋಪ್‌ ನಿರ್ಮಾಣವಾಗಲಿದೆ’ ಎಂದು ಖಗೋಳವಿಜ್ಞಾನಿ ಪ್ರೊ.ಎಸ್‌.ಸಿರಾಜ್ ಹಸನ್‌ ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಶನಿವಾರ ನಡೆದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ದೇಶದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಯಾಗುತ್ತಿದೆ. ಈ ವಿಷಯಗಳ ಬಗ್ಗೆ ಜನರಿಗೆ ಅರಿವಿಲ್ಲ. ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಹೆಚ್ಚಬೇಕು’ ಎಂದರು.

ಭಾರತೀಯ ಜೀವವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ.ಸತ್ಯಜಿತ್‌ ಮೇಯರ್‌ ಮಾತನಾಡಿ, ‘ದೇಶದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಆಗುತ್ತಿದೆ. ಸಣ್ಣ ಸಣ್ಣ ಸಂಶೋಧನೆಗಳು ದೊಡ್ಡ ಸಂಶೋಧನೆಗಳಿಗೆ ನಾಂದಿಯಾಗುತ್ತವೆ’ ಎಂದರು.

ಮೇಳದಲ್ಲಿ 300 ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡಿದ್ದವು. ಆಯಾ ರಾಜ್ಯಗಳ ಅತ್ಯುತ್ತಮ ಮಾದರಿಗಳಿಗೆ ಬಹುಮಾನ ನೀಡಲಾಯಿತು. ಉತ್ತರ ಕನ್ನಡದ ಬೆಳ್ಕಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ರೂಪಿಸಿದ ‘ತ್ಯಾಜ್ಯ ನೀರು ಮರುಬಳಕೆ’ ಮಾದರಿ ‘ರಾಜ್ಯದ ಅತ್ಯುತ್ತಮ ಮಾದರಿ ’ ಪ್ರಶಸ್ತಿ ಗಳಿಸಿತು.

ವೈಯಕ್ತಿಕ ವಿಭಾಗದಲ್ಲಿ ಕೋಲಾರದ ಚಿನ್ಮಯ ವಿದ್ಯಾಲಯದ ಶ್ರಾವಣಿ, ಶಿಕ್ಷಕರ ವಿಭಾಗದಲ್ಲಿ ಖಾನಾಪುರ ತಾಲ್ಲೂಕಿನ ರಾಜೇಂದ್ರ ಭಂಡಾರಿ ಬಹುಮಾನ ಗಳಿಸಿದರು. ಹುಬ್ಬಳ್ಳಿಯ ಚೇತನ್‌ ಪಬ್ಲಿಕ್‌ ಶಾಲೆಯ ಕಿಶನ್‌ ಜಿ. ಅವರಿಗೆ  ‘ಸರ್‌.ಎಂ. ವಿಶ್ವೇಶ್ವರಯ್ಯ ಅತ್ಯುತ್ತಮ ಮಾದರಿ’ ಪ್ರಶಸ್ತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.