ADVERTISEMENT

ವಿದೇಶಿ ಮದ್ಯ ಅಕ್ರಮ ಸಂಗ್ರಹ :ಅಬಕಾರಿ ಸಚಿವರ ವಿರುದ್ಧ ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ಬೆಂಗಳೂರು: `ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಬೇಡಿಕೆಯಂತೆ ವಿದೇಶಿ ಮದ್ಯದ ಬಾಟಲಿಗಳನ್ನು ತಂದು, ಕಚೇರಿಯಲ್ಲಿ ದಾಸ್ತಾನು ಮಾಡಲಾಗಿತ್ತು~ ಎಂದು ಬಂಧಿತ ಅಬಕಾರಿ ಉಪಆಯುಕ್ತ ಎಲ್.ಎನ್.ಮೋಹನ್‌ಕುಮಾರ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತ ವಿಶೇಷ ನ್ಯಾಯಾಧೀಶ ಎನ್.ಸುಧೀಂದ್ರ ರಾವ್, ಸಚಿವರ ವಿರುದ್ಧವೂ ತನಿಖೆಗೆ ಆದೇಶಿಸಿದ್ದಾರೆ.

ಜೆ.ಸಿ.ರಸ್ತೆಯಲ್ಲಿರುವ ಅಬಕಾರಿ ಉಪ ಆಯುಕ್ತರ ಕಚೇರಿಗಳಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಲಭ್ಯವಾಗಿತ್ತು. ಗುರುವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿದ್ದ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಉಪ ಆಯುಕ್ತರ ಕಚೇರಿಗಳಲ್ಲಿ ಶೋಧ ನಡೆಸಿದ್ದರು.
ಪೂರ್ವ ವಿಭಾಗದ ಉಪ ಆಯುಕ್ತ ಮೋಹನ್‌ಕುಮಾರ್ ಕಚೇರಿಯಲ್ಲಿ 24 ಲೀಟರ್ ವಿದೇಶಿ ಮದ್ಯ ಮತ್ತು 27,200 ರೂಪಾಯಿ ನಗದು ಪತ್ತೆಯಾಗಿತ್ತು.

ಪಶ್ಚಿಮ ವಿಭಾಗದ ಉಪ ಆಯುಕ್ತ ಮೊಹಮ್ಮದ್ ಫಸೀವುದ್ದೀನ್ ಕಚೇರಿಯಲ್ಲಿ ರೂ 13,300 ನಗದು ಮತ್ತು ಆರು ವಿದೇಶಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು. ದಕ್ಷಿಣ ಉಪವಿಭಾಗದ ಆಯುಕ್ತ ಮಲ್ಲಿಕಾರ್ಜುನ ಗದ್ದಿ ಕಚೇರಿಯಲ್ಲಿ ಆರು ವಿದೇಶಿ ಮದ್ಯದ ಬಾಟಲಿಗಳು ದೊರೆತಿದ್ದವು.

ಮೋಹನ್‌ಕುಮಾರ್ ಕಚೇರಿಯಲ್ಲಿ ದೊರೆತ ಮದ್ಯದ ಬಾಟಲಿಗಳ ಮೌಲ್ಯ ಲಕ್ಷ ರೂಪಾಯಿಗೂ ಹೆಚ್ಚು. ಉಳಿದ ಇಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಇಲಾಖೆಗೆ ವರದಿ ಕಳುಹಿಸಲು ನಿರ್ಧರಿಸಿದ ಲೋಕಾಯುಕ್ತ ಪೊಲೀಸರು, ಮೋಹನ್‌ಕುಮಾರ್ ಅವರನ್ನು ಬಂಧಿಸಿದ್ದರು. ಪ್ರಾಥಮಿಕ ತನಿಖೆಯ ವೇಳೆ, `ಅವು ಪ್ರಭಾವಿ ವ್ಯಕ್ತಿಗಳಿಗಾಗಿ ನೀಡಲು ತಂದಿದ್ದ ಮದ್ಯದ ಬಾಟಲಿಗಳು~ ಎಂದು ಆರೋಪಿ ಅಧಿಕಾರಿ ಉತ್ತರಿಸಿದ್ದರು. ಅವರ ಹೇಳಿಕೆಯನ್ನು ಮಹಜರು ವರದಿಯಲ್ಲಿ ದಾಖಲಿಸಲಾಗಿತ್ತು.

`ಸಚಿವರಿಗಾಗಿ ತಂದಿದ್ದು~:ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಗಿರೀಶ್ ಮತ್ತು ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ ಅವರಿದ್ದ ತಂಡ, ರಾತ್ರಿ ಆರೋಪಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಅಲ್ಲಿಯವರೆಗೂ ಸುಮ್ಮನೆ ಇದ್ದ, ಮೋಹನ್‌ಕುಮಾರ್, ನ್ಯಾಯಾಧೀಶ ಸುಧೀಂದ್ರ ರಾವ್ ಅವರನ್ನು ನೋಡುತ್ತಿದ್ದಂತೆ ಗಳಗಳನೆ ಅತ್ತರು.

ಆರೋಪಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಅಷ್ಟೊಂದು ವಿದೇಶಿ ಮದ್ಯದ ಬಾಟಲಿಗಳನ್ನು ಏಕೆ ಕಚೇರಿಯಲ್ಲಿ ತಂದಿಡಲಾಗಿತ್ತು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಉಪ ಆಯುಕ್ತ, `ನಮ್ಮ ಇಲಾಖೆ ಸಚಿವರಾದ ರೇಣುಕಾಚಾರ್ಯ ಅವರು ವಿದೇಶಿ ಮದ್ಯ ತಂದು ಕೊಡುವಂತೆ ಸೂಚಿಸಿದ್ದರು. ಅವರಿಗಾಗಿ ಮದ್ಯದ ಅಂಗಡಿಗಳಿಂದ ತರಿಸಿ, ಕಚೇರಿಯಲ್ಲಿ ದಾಸ್ತಾನು ಇರಿಸಿದ್ದೆ. ಇತರೆ ಕೆಲ ಅಬಕಾರಿ ಅಧಿಕಾರಿಗಳೂ ಸಚಿವರಿಗೆ ಕೊಡಲು ನನ್ನ ಬಳಿ ಮದ್ಯದ ಬಾಟಲಿ ನೀಡಿದ್ದರು~ ಎಂದು ತಿಳಿಸಿದರು.

ತನಿಖೆಗೆ ಆದೇಶ:ಆರೋಪಿ ನೀಡಿದ ಹೇಳಿಕೆಯನ್ನು ದೂರನ್ನಾಗಿ ಪರಿಗಣಿಸುವಂತೆ ನಿರ್ದೇಶನ ನೀಡಿದ ನ್ಯಾಯಾಧೀಶರು, ರೇಣುಕಾಚಾರ್ಯ ವಿರುದ್ಧವೂ ತನಿಖೆ ನಡೆಸುವಂತೆ ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ ಅವರಿಗೆ ಆದೇಶಿಸಿದರು. ನ್ಯಾಯಾಲಯದ ಆದೇಶದಂತೆ ಸಚಿವರ ವಿರುದ್ಧವೂ ತನಿಖೆ ನಡೆಸಿ, ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ. ಮೋಹನ್‌ಕುಮಾರ್ ಅವರನ್ನು ಏಪ್ರಿಲ್ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ.

ರೆಸಾರ್ಟ್‌ಗೆ ನೂರಾರು ಬಾಟಲಿ?

ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಗೆ ಪಟ್ಟುಹಿಡಿದು ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ತಂಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಡಿಯೂರಪ್ಪ ಬಣದ ಶಾಸಕರಿಗೆ ಅಬಕಾರಿ ಅಧಿಕಾರಿಗಳಿಂದಲೇ ವಿದೇಶಿ ಮದ್ಯ ಪೂರೈಕೆ ಆಗುತ್ತಿತ್ತು ಎಂಬ ಗುಸುಗುಸು ಕೇಳಿಬಂದಿದೆ.

`ಅಬಕಾರಿ ಉಪ ಆಯುಕ್ತರ ಕಚೇರಿಗಳಿಂದ ರೆಸಾರ್ಟ್‌ಗೆ ನೂರಾರು ಬಾಟಲಿ ಮದ್ಯ ಪೂರೈಕೆಯಾಗಿತ್ತು. ಈ ಸಂಗತಿಯ ಬಗ್ಗೆ ಖಚಿತ ಮಾಹಿತಿ ಹೊಂದಿದ್ದವರೇ ಲೋಕಾಯುಕ್ತ ಪೊಲೀಸರಿಗೆ ಸುಳಿವು ನೀಡಿದ್ದರು~ ಎಂಬ ವದಂತಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.