ADVERTISEMENT

ವಿದ್ಯಾರ್ಥಿಗಳಿಗೆ ಹಾಲು ಪೂರೈಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ಬೆಂಗಳೂರು: ಶಾಲಾ ಮಕ್ಕಳಿಗೆ ಹಾಲು ಸರಬರಾಜು ಮಾಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ಪ್ರಸ್ತಾವ ಸಲ್ಲಿಸಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಕೆಎಂಎಫ್ ಇತ್ತೀಚೆಗೆ ಈ ಪ್ರಸ್ತಾವ ಸಲ್ಲಿಸಿದ್ದು, ಆ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ.

ಪ್ರತಿ ಮಗುವಿಗೆ ನಿತ್ಯ 150 ಮಿಲಿ ಲೀಟರ್ (ಎಂ ಎಲ್) ಹಾಲು ನೀಡಬಹುದು. ಇದಕ್ಕೆ 15 ಗ್ರಾಂ ಹಾಲಿನ ಪುಡಿ ಬೇಕಾಗುತ್ತದೆ. ಈ ರೀತಿ ವಾರದಲ್ಲಿ ಮೂರು ದಿನ ಮಕ್ಕಳಿಗೆ ಹಾಲು ಕೊಡಬಹುದು. ಒಂದು ಕೆ.ಜಿ ಹಾಲಿನ ಪುಡಿ ಉತ್ಪಾದನೆಗೆ 175 ರೂಪಾಯಿ ಖರ್ಚಾಗಲಿದೆ. ಆದರೆ, ಅದನ್ನು 145 ರೂಪಾಯಿ ದರದಲ್ಲಿ ಶಿಕ್ಷಣ ಇಲಾಖೆಗೆ ನೀಡಲು ಕೆಎಂಎಫ್ ನಿರ್ಧರಿಸಿದ್ದು, ಆ ಬಗ್ಗೆಯೂ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ.

ಕೆಎಂಎಫ್‌ನ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಈ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಶಿಕ್ಷಣ ಇಲಾಖೆ ಕಾರ್ಯದರ್ಶಿ ಕುಮಾರ್ ನಾಯಕ್ ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
 
ಆದರೆ ಕಾಗೇರಿ ಅವರು `ಪ್ರಜಾವಾಣಿ~ ಜತೆ ಮಾತನಾಡಿ, `ಕೆಎಂಎಫ್‌ನ ಪ್ರಸ್ತಾವ ಇನ್ನೂ ನನ್ನ ಗಮನಕ್ಕೆ ಬಂದಿಲ್ಲ~ ಎಂದರು. ಒಂದರಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ ಒಟ್ಟು 65 ಲಕ್ಷ ವಿದ್ಯಾರ್ಥಿಗಳು ರಾಜ್ಯದಲ್ಲಿ ದ್ದಾರೆ. ಇವರಲ್ಲಿ 57 ಸಾವಿರ ಮಂದಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಕೆಎಂಎಫ್‌ನಲ್ಲಿ ಸದ್ಯ 15 ಸಾವಿರ ಟನ್ ಹಾಲಿನ ಪುಡಿ ದಾಸ್ತಾನು ಇದೆ. ಇದರ ಒಟ್ಟು ಮೌಲ್ಯ ಸುಮಾರು 250 ಕೋಟಿ ರೂಪಾಯಿ. ಕೆಎಂಎಫ್ ಪ್ರಸ್ತಾವ ಪ್ರಕಾರ ಹಾಲಿನ ಪುಡಿ ಸರಬರಾಜು ಮಾಡಿದರೆ ಶಿಕ್ಷಣ ಇಲಾಖೆ ವಾರ್ಷಿಕ 200 ಕೋಟಿ ರೂಪಾಯಿ ಭರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.