ADVERTISEMENT

ವಿದ್ಯಾರ್ಥಿಯಾಗಿ ಫೇಲಾದರೂ ಮೇಷ್ಟ್ರಾಗಿ ಪಾಸಾದೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 18:45 IST
Last Updated 20 ಅಕ್ಟೋಬರ್ 2012, 18:45 IST

ಮನೆಯಂಗಳದಲ್ಲಿ ಮಾತುಕತೆ

ಹಿರಿಯ ಸಾಹಿತಿ ಪ್ರೊ. ರಾಜಗೋಪಾಲ್ ನೆನಪುಗಳ ಮೆರವಣಿಗೆ
ಬೆಂಗಳೂರು
: `ಶೃಂಗೇರಿಯ ವಿದ್ಯಾಶಂಕರ, ಹಂಪಿಯ ವಿರೂಪಾಕ್ಷೇಶ್ವರ ಸೇರಿದಂತೆ ಬಹುತೇಕ ಶಿವಾಲಯಗಳು ಮೂಲತಃ ಸೂರ್ಯ ದೇವಾಲಯಗಳಾಗಿದ್ದವು~ ಎಂದು ಹಿರಿಯ ಸಾಹಿತಿ, ದೇವಾಲಯಗಳ ವಿನ್ಯಾಸ ಸಂಶೋಧಕ ಪ್ರೊ. ಕಟ್ಟೇಪುರ ವೆಂಕಟರಾಮಯ್ಯ ರಾಜಗೋಪಾಲ್ ಪ್ರತಿಪಾದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ `ಮನೆಯಂಗಳದಲ್ಲಿ ಮಾತುಕತೆ~ಯಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. `ದೇವಾಲಯಗಳಲ್ಲಿ ಸ್ಥಾಪಿಸಲಾಗಿದ್ದ ಸೂರ್ಯನ ಪ್ರತಿಮೆಯನ್ನು ಕಾಲಾಂತರದಲ್ಲಿ ತೆರವುಗೊಳಿಸಿ ಶಿವನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂಬುದು ನಾನು ಸಂಶೋಧನೆಯಲ್ಲಿ ಕಂಡುಕೊಂಡ ಸತ್ಯವಾಗಿದೆ~ ಎಂದು ವಿವರಿಸಿದರು.

ಮೊದಲು ಶಾನಭೋಗರಾಗಿದ್ದ ರಾಜಗೋಪಾಲ್, ಕಂದಾಯ ವಸೂಲಿ ಮಾಡುವಂತಹ ಆ ಹುದ್ದೆ ತೊರೆದು ಶಿಕ್ಷಕ ವೃತ್ತಿಗೆ ಒಲಿದ ಬಗೆಯನ್ನು ಮೆಲುಕು ಹಾಕಿದರು. `ಒಂದೆಡೆ ಶಾನಭೋಗ ವೃತ್ತಿಯಿಂದ ರೈತರ ಕಷ್ಟ ಏನೆಂಬುದು ಅರ್ಥವಾಗಿತ್ತು. ಇನ್ನೊಂದೆಡೆ ನನ್ನ ಗುರುಗಳಾಗಿದ್ದ ಎ.ಎನ್. ಮೂರ್ತಿರಾಯರು, ಬಿ.ಎಂ. ಶ್ರೀಕಂಠಯ್ಯ, ತಿ.ನಂ. ಶ್ರೀಕಂಠಯ್ಯ, ಸಿ.ಡಿ. ನರಸಿಂಹಯ್ಯ ಅವರಂತೆ ಬೆಳೆಯುವ ಮನಸ್ಸಿತ್ತು. ಆದ್ದರಿಂದಲೇ ನಾನು ಮೇಷ್ಟ್ರಾಗಿ ಗುರುತಿಸಿಕೊಂಡೆ~ ಎಂದು ನೆನೆದರು.

`ಇಂಟರ್ ಮೀಡಿಯಟ್‌ನಲ್ಲಿ ಫೇಲಾಗಿದ್ದ ನಾನು ಮೇಷ್ಟ್ರಾಗಿ ಮಾತ್ರ ಪಾಸಾದೆ~ ಎಂದು ಚಟಾಕಿ ಹಾರಿಸಿದರು. `ಮೇಷ್ಟ್ರಾಗಿ ಸುಳ್ಳು ಹೇಳುವುದು ಕಷ್ಟ. ಗೊತ್ತಿಲ್ಲದ್ದನ್ನು ಅಧ್ಯಯನ ಮಾಡಿದ ಮೇಲೆ ಪಾಠ ಮಾಡಬೇಕು. ನಮ್ಮ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿಲ್ಲದಿದ್ದಾಗ ತಿಳಿದವರಿಂದ ಮಾಹಿತಿ ಪಡೆದ ಬಳಿಕ ಉತ್ತರ ಕೊಡುತ್ತಿದ್ದರು ನಮ್ಮ ಗುರುಗಳು~ ಎಂದು ಅವರು ತಮ್ಮ ಮನದಂಗಳದ ನೆನಪನ್ನು ಹೆಕ್ಕಿ ತೆಗೆದರು.

 `ಪ್ರಜಾವಾಣಿ~ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈಎನ್ಕೆ ಅವರ ಗೆಳೆತನದಿಂದ ನನ್ನ ಅಧ್ಯಯನ ಆಸಕ್ತಿ ತೀವ್ರವಾಗಿ ಹೆಚ್ಚಿತು. `ಗುಂಡು~ ಹಾಕುತ್ತಿದ್ದ ವೈಎನ್ಕೆ ಆ ಗಳಿಗೆಯಲ್ಲಿ ಇಂಗ್ಲಿಷ್ ಸಾಹಿತ್ಯದ ಬಗೆಗೆ ಹರಟೆ ಹೊಡೆಯುತ್ತಿದ್ದರು. ನನಗೆ `ಬೇರ್‌ಫುಟ್ ಇನ್ ಅಥೆನ್ಸ್~ ಕೃತಿಯ ಹುಚ್ಚು ಹಿಡಿಸಿದ್ದೂ ಅವರೇ. ಇದೇ ಕಥೆ ಒಳಗೊಂಡ ಕನ್ನಡ ನಾಟಕವನ್ನು ನಾನು ತಂದಿದ್ದೇನೆ~ ಎಂದು ಹೇಳಿದರು.ತಮ್ಮ ವೃತ್ತಿ ಜೀವನದ ಉದ್ದಕ್ಕೂ ನೂರಾರು ನಾಟಕಗಳನ್ನು ವಿದ್ಯಾರ್ಥಿಗಳಿಂದ ಆಡಿಸಿದವರು ರಾಜಗೋಪಾಲ್.

ಮೋಡಣ್ಣನ ತಮ್ಮ, ನನ್ನ ಗೋಪಾಲ ನಾಟಕಗಳ ಪ್ರದರ್ಶನದ ರಸನಿಮಿಷಗಳನ್ನು ಶ್ರೋತೃಗಳಿಗೆ ಅವರು ಯಥಾವತ್ತಾಗಿ ಎತ್ತಿಕೊಟ್ಟರು. ರಂಗಕರ್ಮಿಗಳಾದ ನಾಯಿರಿ, ಪ್ರಸನ್ನ ಮತ್ತು ರಘುನಂದನ ಅವರ ಗೆಳೆತನ ನನಗೆ ಸಾಕಷ್ಟು ಖುಷಿ ಕೊಟ್ಟಿದೆ ಎಂದೆನ್ನುವಾಗ ಕೃತಜ್ಞತಾ ಭಾವ ಅವರ ಮೊಗದಲ್ಲಿ ಲಾಸ್ಯವಾಡುತ್ತಿತ್ತು.

`ಸಾಹಿತ್ಯ ಎಂಬುದು ಧರ್ಮವೂ ಹೌದು, ಸಂಸ್ಕೃತಿಯೂ ಹೌದು, ಐತಿಹಾಸಿಕ ದಾಖಲೆಯೂ ಹೌದು~ ಎಂದು ಅವರು ಪ್ರತಿಪಾದಿಸಿದರು. `ಕನ್ನಡದಂತಹ ಶ್ರೇಷ್ಠ ಭಾಷೆ ಬೇರೆ ಸಿಗಲ್ಲ. ನಾವು ಉಚ್ಛರಿಸುವುದನ್ನೇ ಬರೆಯುತ್ತೇವೆ. ಆದರೆ, ತಮಿಳು, ಫ್ರೆಂಚ್, ಇಂಗ್ಲಿಷ್ ಸೇರಿದಂತೆ ಜಗತ್ತಿನ ಬಹುತೇಕ ಭಾಷೆಗಳಲ್ಲಿ ಉಚ್ಛಾರ ಮತ್ತು ಬರವಣಿಗೆ ಬೇರೆ, ಬೇರೆಯಾಗಿದೆ~ ಎಂದು ವಿಶ್ಲೇಷಿಸಿದರು.

`ತಮಿಳರು ಮಹಾಪ್ರಾಣವನ್ನೇ ಮರೆತ ಅಲ್ಪಪ್ರಾಣಿಗಳು~ ಎಂದು ಛೇಡಿಸಿದರು. ಕೇನ್ ಕಲಾ ಶಾಲೆಯನ್ನು ಸ್ಥಾಪಿಸಿದ ಮಹಾನ್ ಕಲಾವಿದ ಹಡಪದ ಅವರ ನೆನಪು ಮಾಡಿಕೊಂಡ ರಾಜಗೋಪಾಲ್, `ಆ ಶಾಲೆ ಚೆನ್ನಾಗಿ ಬೆಳೆಯಬೇಕು~ ಎಂದು ಹಾರೈಸಿದರು. `ಹಡಪದ ಅವರ ಪ್ರತಿಮೆ ಸ್ಥಾಪನೆಗೆ ಮಹಾನಗರ ಪಾಲಿಕೆ ಚಿಂತಿಸಬೇಕು~ ಎಂಬ ಸಲಹೆಯನ್ನೂ ನೀಡಿದರು.

`ಕಲ್ಯಾಣದ ಕೊನೆಯ ದಿನಗಳು~ ಸೇರಿದಂತೆ ಹಲವು ನಾಟಕಗಳನ್ನೂ ರಚಿಸಿರುವ ಅವರು, ಬಸವಣ್ಣನವರ ವಚನಗಳ ಅರ್ಥವನ್ನು ವಿಭಿನ್ನವಾಗಿ ವ್ಯಾಖ್ಯಾನಿಸಿದರು. `ಸುತ್ತಾಟ, ಸಂಶೋಧನೆ, ಅಧ್ಯಯನ ಮತ್ತು ಪಾಠ ನನ್ನನ್ನು ಈ ಹಂತದ ವರೆಗೆ ಕರೆದುಕೊಂಡು ಬಂದಿವೆ~ ಎಂದು ತಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಟ್ಟರು. `ನದಿಯ ಮೇಲಿನ ಗಾಳಿ~ ಎಂಬ ಕವನ ಸಂಕಲನವನ್ನೂ ರಚಿಸಿರುವ ರಾಜಗೋಪಾಲ್, ಮಾತು ಮುಗಿಸಿದಾಗ ಹಳೆಯ ನೆನಪುಗಳ ತಂಗಾಳಿ ಬೀಸುತ್ತಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಆರ್. ರಾಮಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT