ADVERTISEMENT

ವಿದ್ಯಾರ್ಥಿ ಬಂದರೆ ಪಾಲಕರಿಗೆ ರೂ 300!

ಮಕ್ಕಳ ಸೆಳೆಯಲು ಸರ್ಕಾರಿ ಶಾಲೆಗಳ ಯೋಜನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:44 IST
Last Updated 1 ಜೂನ್ 2013, 19:44 IST

ಕಾರವಾರ: ಮಕ್ಕಳನ್ನು ತಮ್ಮ ಶಾಲೆಗೆ ಸೆಳೆಯಲು ಖಾಸಗಿ ಶಾಲೆಗಳು ಹಲವು ಕಸರತ್ತುಗಳನ್ನು ನಡೆಸುವುದು ಸಹಜ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಸಾವಂತವಾಡ ಸರ್ಕಾರಿ ಶಾಲೆಗೆ ಮಕ್ಕಳು ಮರಳಿದರೆ ಪಾಲಕರಿಗೆ ರೂ 300 ನೀಡುವುದಾಗಿ ಶಾಲಾಭಿವೃದ್ಧಿ ಸಮಿತಿ ಹೆಸರಿನಲ್ಲಿ ಕರಪತ್ರ ಮುದ್ರಿಸಿ ಹಂಚಲಾಗಿದೆ.

ಜತೆಗೆ ಶಾಲೆಯಲ್ಲಿರುವ ಸೌಲಭ್ಯಗಳ ಬಗ್ಗೆಯೂ ವಿವರಿಸಲಾಗಿದೆ. ಈ ಹಿರಿಯ ಪ್ರಾಥಮಿಕ ಶಾಲೆಗೆ ಸುಸಜ್ಜಿತವಾದ ಶಾಲಾ ಕಟ್ಟಡವಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸ್ನಾನಗೃಹ, ಆಟದ ಮೈದಾನ ಹಾಗೂ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಇದೆ ಎಂದು ಕರಪತ್ರದಲ್ಲಿ ತಿಳಿಸಲಾಗಿದೆ.

ಇದುವರೆಗೆ ಕೇವಲ ಖಾಸಗಿ ಶಾಲೆಗಳು ಮಾತ್ರ ತಮ್ಮಲ್ಲಿರುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಜಾಹೀರಾತು, ಫ್ಲೆಕ್ಸ್ ಮೊರೆ ಹೋಗುತ್ತಿದ್ದವು. ಈಗ ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳು ಕೂಡ ಈ ವಿಚಾರದಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ಒಡ್ಡಿವೆ. ಸರ್ಕಾರಿ ಶಾಲೆಗಳಲ್ಲೂ ಸಾಕಷ್ಟು ಸೌಲಭ್ಯಗಳು ಇರುತ್ತವೆ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸಲು ಕಾರವಾರ ತಾಲ್ಲೂಕಿನಲ್ಲಿರುವ ಎಲ್ಲ 155 ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಹಾಗೂ ಏಳು ಸರ್ಕಾರಿ ಪ್ರೌಢಶಾಲೆಗಳು ಮುಖ್ಯ ಶಿಕ್ಷಕರ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಹೆಸರಿನಲ್ಲಿ ಕರಪತ್ರಗಳಲ್ಲಿ ಮುದ್ರಿಸಿ ಹಂಚಿವೆ.

ಮಕ್ಕಳನ್ನು ಆಕರ್ಷಿಸಲು ಸಾವಂತವಾಡ ಶಾಲೆ ತಮ್ಮ ಶಾಲೆಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಖಾತೆಗೆ ಪ್ರತಿ ತಿಂಗಳು ್ಙ 100 ಎಫ್.ಡಿ.      (ಫಿಕ್ಸ್ ಡಿಪಾಸಿಟ್) ಇಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ವಿಷಯವನ್ನೂ ಕರಪತ್ರದಲ್ಲಿ ಮುದ್ರಿಸಲಾಗಿದೆ. ಈ ಯೋಜನೆಯನ್ನು ಶಾಲಾ ಶಿಕ್ಷಕರ ಹಾಗೂ ಎಸ್‌ಡಿಎಂಸಿ ಸಹಯೋಗದೊಂದಿಗೆ ಜಾರಿಗೆ ತರಲಾಗಿದೆ.

ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೆಳೆಯಲು ಆ ಮಕ್ಕಳ  ಪಾಲಕರಿಗೆ ರೂ 300 ಪ್ರೋತ್ಸಾಹ ಧನ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ. ಈ ಅಂಶವನ್ನೂ ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಶೂ, ಸ್ಕೂಲ್ ಬ್ಯಾಗ್, ಪೆನ್ನು, ನೋಟ್‌ಬುಕ್, ವಾರಕ್ಕೊಮ್ಮೆ ಸಂಗೀತ, ಈಜು ಕಲಿಸಲು ಸಂಪನ್ಮೂಲ ಶಿಕ್ಷಕರನ್ನು ನೇಮಿಸಲಾಗುವುದು, ಇಂಗ್ಲಿಷ್ ಕಲಿಕೆಗಾಗಿ ವಿಶೇಷ ಸಂಪನ್ಮೂಲ ಶಿಕ್ಷಕರನ್ನು ವಾರದಲ್ಲಿ ಎರಡು ದಿನ ಒದಗಿಸುವ ಭರವಸೆಯನ್ನು ಶಾಲಾಭಿವೃದ್ಧಿ ಮಂಡಳಿ ನೀಡಿದೆ.

`ಮಕ್ಕಳನ್ನು ಆಕರ್ಷಿಸಲು ಖಾಸಗಿ ಶಾಲೆಯವರು ತಮ್ಮ ಶಾಲೆಯಲ್ಲಿರುವ ಸೌಲಭ್ಯಗಳ ಬಗ್ಗೆ ಅಬ್ಬರದ ಪ್ರಚಾರ ನಡೆಸುತ್ತಾರೆ. ಸರ್ಕಾರಿ ಶಾಲೆಗಳಲ್ಲೂ ಸೌಲಭ್ಯಗಳು ಇದೇ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸಲು ಕರಪತ್ರಗಳನ್ನು ಮುದ್ರಿಸಲಾಗಿದೆ.

ಸಾರ್ವಜನಿಕರಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಈ ಬಾರಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಸಾಧ್ಯತೆ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.