ADVERTISEMENT

ವಿದ್ಯುತ್ ಸಮಸ್ಯೆ ಎದುರಿಸಲು ಸೌರ ಪಂಪ್‌ಸೆಟ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2011, 19:15 IST
Last Updated 19 ನವೆಂಬರ್ 2011, 19:15 IST
ವಿದ್ಯುತ್ ಸಮಸ್ಯೆ ಎದುರಿಸಲು ಸೌರ ಪಂಪ್‌ಸೆಟ್
ವಿದ್ಯುತ್ ಸಮಸ್ಯೆ ಎದುರಿಸಲು ಸೌರ ಪಂಪ್‌ಸೆಟ್   

ಬೆಂಗಳೂರು: ರಾಜ್ಯದ ವಿದ್ಯುತ್ ಸಮಸ್ಯೆ ಸಂಪೂರ್ಣವಾಗಿ ಪರಿಹಾರ ಕಾಣಲು ಇನ್ನೂ ಎರಡು ವರ್ಷ ಬೇಕು ಎಂದು ಸರ್ಕಾರವೇ ಹೇಳಿದೆ. ಅಲ್ಲಿಯವರೆಗೆ ವಿದ್ಯುತ್ ಖೋತಾ ಖಂಡಿತ. ರೈತರ ಪಂಪ್‌ಸೆಟ್‌ಗಳಿಗೆ ತ್ರೀ ಫೇಸ್ ವಿದ್ಯುತ್ ಯಾವಾಗ ದೊರೆಯುತ್ತದೆಯೋ ಹೇಳಲಾಗದು. ಇಂಥ ಸಂದರ್ಭದಲ್ಲಿ ತಮ್ಮ ಬೆಳೆಗಳಿಗೆ ನೀರುಣಿಸಲು ರೈತರು ಏನು ಮಾಡಬೇಕು?

ಬೇರೆ ದಾರಿ ಇಲ್ಲ, ಸೋಲಾರ್ ಪಂಪ್‌ಸೆಟ್ಟುಗಳೇ ಅಂತಿಮ ಆಯ್ಕೆ ಎನ್ನುತ್ತಾರೆ `ಜೈನ್ ಇರಿಗೇಷನ್ ಸಿಸ್ಟಮ್ಸ~ ಕಂಪೆನಿಯ ಪ್ರತಿನಿಧಿಗಳು. ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕೃಷಿ ಮೇಳದಲ್ಲಿ ಸೌರಶಕ್ತಿಯಿಂದ ನೀರೆತ್ತುವ ಪಂಪ್‌ಸೆಟ್‌ನ ಮಾದರಿಯನ್ನು ಪ್ರದರ್ಶನಕ್ಕಿಟ್ಟಿರುವ ಕಂಪೆನಿ, 0.5 ಅಶ್ವ ಶಕ್ತಿಯ (ಎಚ್.ಪಿ.) ಪಂಪ್‌ಸೆಟ್ಟುಅನ್ನು ಒಂದು ಲಕ್ಷ ರೂಪಾಯಿಗೆ ನೀಡುತ್ತದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಶೇಕಡ 30ರಷ್ಟು ಸಹಾಯಧನವೂ ಇದೆ.

ತಾನು ಒದಗಿಸುವ ಸೌರ ಫಲಕಗಳು 30 ವರ್ಷ ಬಾಳಿಕೆ ಬರುತ್ತದೆ ಎಂಬ ಭರವಸೆಯನ್ನೂ ಕಂಪೆನಿ ನೀಡುತ್ತದೆ. `ಈ ಪಂಪ್‌ಸೆಟ್‌ಗೆ ಯಾವುದೇ ನಿರ್ವಹಣಾ ಖರ್ಚು ಇಲ್ಲ. ಸೂರ್ಯನ ಪ್ರಖರತೆ ಹೆಚ್ಚಿದ್ದಾಗ ಪಂಪ್‌ಸೆಟ್ಟಿನ ಕಾರ್ಯಕ್ಷಮತೆ ಕೂಡ ಹೆಚ್ಚಾಗಿರುತ್ತದೆ. ಆದರೂ ಶೇಕಡ 30ರಷ್ಟು ಸೂರ್ಯನ ಬೆಳಕಿದ್ದರೂ ಸಾಕು, ಪಂಪ್‌ಸೆಟ್ ಕೆಲಸ ಮಾಡುತ್ತದೆ~ ಎನ್ನುತ್ತಾರೆ ಜೈನ್ ಇರಿಗೇಷನ್ ಕಂಪೆನಿಯ ಉತ್ಪನ್ನಗಳ ಬೆಂಗಳೂರು ವಿಭಾಗದ ವಿತರಕ ವೀರ ರಾಘವನ್.

ಬೆಳಿಗ್ಗೆ ಸೂರ್ಯೋದಯ ಆದಾಗಿನಿಂದ ಸೂರ್ಯಾಸ್ತದವರೆಗೆ ಸ್ವಯಂಚಾಲಿತವಾಗಿ ಕೆಲಸ ಮಾಡುವಂಥ ವ್ಯವಸ್ಥೆ ಕೂಡ ಇದರಲ್ಲಿದೆ. ಈ ವ್ಯವಸ್ಥೆ ಬೇಡವೆಂದರೆ ರೈತರೇ ನಿಯಂತ್ರಿಸುವ ವ್ಯವಸ್ಥೆಗೂ ಬದಲಾಯಿಸಿಕೊಳ್ಳಬಹದು. ಈ ಪಂಪ್‌ಸೆಟ್ ಜೊತೆ ನೀಡುವ ಸೌರ ಫಲಕದಿಂದ ಬಂದ ವಿದ್ಯುತ್‌ಅನ್ನು ಸಂಗ್ರಹಿಸಿಡಲು ಬ್ಯಾಟರಿ ವ್ಯವಸ್ಥೆ ಇಲ್ಲ.
0.5 ಎಚ್.ಪಿ.ಯಿಂದ ಆರಂಭವಾಗಿ 10 ಎಚ್.ಪಿ.ವರೆಗಿನ ಪಂಪ್‌ಸೆಟ್‌ಗಳು ಕಂಪೆನಿಯಲ್ಲಿ ಲಭ್ಯ. ಪ್ರತಿಯೊಂದು ಪಂಪ್‌ಸೆಟ್‌ಗೂ ಶೇಕಡ 30ರಷ್ಟು ಸಹಾಯಧನ ಕೇಂದ್ರ ಸರ್ಕಾರದಿಂದ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.