ಬೆಂಗಳೂರು: ವಿಧಾನ ಮಂಡಲಕ್ಕೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇದೇ 18ರಂದು ವಜ್ರ ಮಹೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಗುವುದು.
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿದಂತೆ ಉಭಯ ಸದನಗಳಲ್ಲಿನ ಸದನ ನಾಯಕರೊಂದಿಗೆ ಮಂಗಳವಾರ ಸಮಾಲೋಚನೆ ನಡೆಸಿದ ನಂತರ ಸ್ಪೀಕರ್ ಕೆ.ಜಿ.ಬೋಪಯ್ಯ, ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ರಾಜ್ಯಪಾಲ ಎಚ್. ಆರ್.ಭಾರದ್ವಾಜ್ ಸಮಾರಂಭ ಉದ್ಘಾಟಿಸಲಿದ್ದಾರೆ. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮುಖ್ಯಭಾಷಣ ಮಾಡಲಿದ್ದಾರೆ ಎಂದರು. 1952ರ ಜೂನ್ 18ರಂದು ಪ್ರಥಮ ಬಾರಿಗೆ ವಿಧಾನ ಮಂಡಲದ ಅಧಿವೇಶನ ನಡೆದಿತ್ತು.
ಮೊದಲ ವಿಧಾನಸಭೆ ಶಾಸಕರಾಗಿದ್ದ ಯು.ಎಂ. ಮಾದಪ್ಪ (ಚಾಮರಾಜನಗರ), ಡಿ.ಜಿ. ತಿಮ್ಮೇಗೌಡ (ತಿಪಟೂರು) ಹಾಗೂ ಮುಲ್ಕಾ ಗೋವಿಂದ ರೆಡ್ಡಿ (ಚಿತ್ರದುರ್ಗ) ಅವರನ್ನು ಸನ್ಮಾನಿಸಲಾಗುವುದು. ಆರು ಜನ ಮಾಜಿ ಮುಖ್ಯಮಂತ್ರಿಗಳು, ಎಂಟು ಮಂದಿ ಮಾಜಿ ಸ್ಪೀಕರ್‌ಗಳನ್ನು ಗೌರವಿಸಲಾಗುವುದು ಎಂದು ವಿವರಿಸಿದರು.
ವಿಧಾನಸಭೆ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ನಡೆಯಲಿದೆ. 120 ಪುಟಗಳ `ಸವಿ ನೆನಪು~ ಕಿರು ಹೊತ್ತಿಗೆ ಹೊರತರಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.