ADVERTISEMENT

ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರು: ಸಂಸತ್‌ನಲ್ಲಿ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 18:55 IST
Last Updated 4 ಆಗಸ್ಟ್ 2012, 18:55 IST

ಬೆಂಗಳೂರು: `ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಹೆಸರನ್ನು ಇಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರ ಸರ್ವಾನುಮತದಿಂದ ನಿರ್ಣಯ ಕೈಗೊಂಡು ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದೇ 8ರಿಂದ ನಡೆಯುವ ಪಾರ್ಲಿಮೆಂಟ್ ಅಧಿವೇಶನದಲ್ಲಿ ಈ ವಿಚಾರವನ್ನು ಪಕ್ಷಾತೀತವಾಗಿ ಪ್ರಸ್ತಾಪಿಸಲಾಗುವುದು~ ಎಂದು ಸಂಸದ ಅನಂತ ಕುಮಾರ್ ಅವರು ತಿಳಿಸಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಕೇಂದ್ರದ ಮೇಲೆ ಒತ್ತಡ ಹೇರಲು ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯದ ನಿಯೋಗ ನವದೆಹಲಿಗೆ ಇದೇ 9ಕ್ಕೆ ಆಗಮಿಸಬೇಕು. ನಿಯೋಗದ ಜತೆಗೆ ತೆರಳಿ ಪ್ರಧಾನಮಂತ್ರಿ, ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರಲಾಗುವುದು~ ಎಂದರು.

`ನವದೆಹಲಿ, ಚೆನ್ನೈ, ಕೋಲ್ಕತ್ತ ನಗರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡಿದೆ. ಅದೇ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ 5,000 ಕೋಟಿ ರೂಪಾಯಿ ಅನುದಾನ ನೀಡಬೇಕು~ ಎಂದು ಅವರು ಆಗ್ರಹಿಸಿದರು.

`ರಾಜ್ಯದ 146 ತಾಲ್ಲೂಕುಗಳಲ್ಲಿ ಬರ ಇದೆ. 1,500 ಕೋಟಿ ರೂಪಾಯಿ ತಕ್ಷಣ ನೀಡುವಂತೆ ಕೇಂದ್ರಕ್ಕೆ ರಾಜ್ಯ ಆಗ್ರಹಿಸಿದೆ. ಆದರೆ, ಕೇಂದ್ರ ಸರ್ಕಾರ ಗ್ರಾಮ ಸಡಕ್, ಉದ್ಯೋಗ ಖಾತರಿ, ಕೂಲಿಗಾಗಿ ಕಾಳು ಯೋಜನೆಯ ಅನುದಾನವನ್ನು ವಿಶೇಷ ಅನುದಾನ ಎನ್ನುತ್ತಿದೆ. ಮಹಾರಾಷ್ಟ್ರಕ್ಕೆ ವಿದರ್ಭ ಪ್ಯಾಕೇಜ್ ನೀಡಿದಂತೆ ರಾಜ್ಯಕ್ಕೂ ಕರ್ನಾಟಕ ಪ್ಯಾಕೇಜ್ ನೀಡಬೇಕು~ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.