ADVERTISEMENT

ವಿ.ವಿ ಆವರಣದಲ್ಲಿ ಭದ್ರತೆ ಹೆಚ್ಚಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆ ಹೆಚ್ಚಿ `ಅಸುರಕ್ಷಿತ ಭಾವನೆ~ ವ್ಯಕ್ತವಾದ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಬಲಪಡಿಸುವ ಬಗ್ಗೆ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ಎನ್.ರಂಗಸ್ವಾಮಿ ಬುಧವಾರ ಕ್ಯಾಂಪಸ್‌ನಲ್ಲಿರುವ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜತೆ ಸಭೆ ನಡೆಸಿ ಸಮಾಲೋಚನೆ ನಡೆಸಿದರು.

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ವಿವಿಯಲ್ಲಿ ಭದ್ರತಾ ಕ್ರಮಗಳನ್ನು ಬಲಪಡಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ತುರ್ತು ಸಭೆ ಕರೆದು ಸಮಾಲೋಚನೆ ನಡೆಸಲಾಯಿತು.

ರಂಗಸ್ವಾಮಿ ಮಾತನಾಡಿ, `ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಜನರು ಹಾಗೂ ವಾಹನಗಳ ಬಗ್ಗೆ ನಿಗಾ ಇಡಲು ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯ ನಿಯೋಜನೆ, ಗಸ್ತು ತಿರುಗುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಶಿಕ್ಷಣ ಸಂಸ್ಥೆಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಬೇಕಿದೆ~ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಮಾತನಾಡಿ, `ಜ್ಞಾನ  ಭಾರತಿ ಕ್ಯಾಂಪಸ್‌ನಲ್ಲಿ ವಿವಿಯ ಹುಡುಗರು ಹಾಗೂ ಹುಡುಗಿಯರ 12 ಹಾಸ್ಟೆಲ್‌ಗಳಿವೆ. ನೇಪಾಳ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣವು ವಿವಿಗೆ ಕಪ್ಪುಚುಕ್ಕೆಯಾಗಿದೆ. ಅಗತ್ಯ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಹೊತ್ತಿನಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ ಇಡಲಾಗುವುದು~ ಎಂದರು.

ನ್ಯಾಷನಲ್ ಲಾ ಸ್ಕೂಲ್‌ನ ಕುಲಸಚಿವ (ಹಂಗಾಮಿ) ಕೆ.ಅಶ್ವತ್ಥ ರೆಡ್ಡಿ ಮಾತನಾಡಿ, `ತಮ್ಮ ಸಂಸ್ಥೆ ಭದ್ರತೆಯನ್ನು ಇನ್ನಷ್ಟು ಬಲಪಡಿಸಲಿದೆ. ಸೂಕ್ತ ಕಾರಣ ಇಲ್ಲದೆ ವಿದ್ಯಾರ್ಥಿಗಳನ್ನು ರಾತ್ರಿ 7 ಗಂಟೆ ಬಳಿಕ ಕಾಲೇಜಿನ ವ್ಯಾಪ್ತಿಯಿಂದ ಹೊರಗೆ ಹೋಗಲು ಅವಕಾಶ ನೀಡುವುದಿಲ್ಲ~ ಎಂದರು.

ಅತ್ಯಾಚಾರ: ತನಿಖೆ ಮುಂದುವರಿಸಲು ನಿರ್ಧಾರ
ಬೆಂಗಳೂರು:
ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ವೈದ್ಯಕೀಯ ವರದಿಗೆ ಹೆಚ್ಚಿನ ಮಹತ್ವ ನೀಡದೆ ತನಿಖಾ ಕಾರ್ಯ ಮುಂದುವರಿಸಲು ನಿರ್ಧರಿಸಿದ್ದಾರೆ.

`ವೈದ್ಯಕೀಯ ಪರೀಕ್ಷೆ ವರದಿ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ವೈದ್ಯಕೀಯ ಪರೀಕ್ಷೆಯ ವರದಿಗೂ ನಮಗೂ ಸಂಬಂಧವಿಲ್ಲ. ಆರೋಪಿಗಳನ್ನು ಹಿಡಿಯುವುದಷ್ಟೇ ನಮ್ಮ ಆದ್ಯತೆ. ಬೇರೆ ಪ್ರಕರಣಗಳಂತೆಯೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಿಬ್ಬಂದಿ, ಆರೋಪಿಗಳನ್ನು ಪತ್ತೆ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಿರುವ ವೈದ್ಯರು ವರದಿ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, `ವೈದ್ಯಕೀಯ ವರದಿಯ ಮೇಲೆ ಸಿಬ್ಬಂದಿ ಅವಲಂಬಿತರಾಗಿಲ್ಲ. ವೈದ್ಯಕೀಯ ವರದಿಯಲ್ಲಿ ಯಾವ ಅಂಶಗಳಿವೆ ಎಂಬುದು ಮುಖ್ಯವಲ್ಲ. ದೂರು ನೀಡಿರುವ   ಯುವತಿ ಹೇಳಿಕೆಯಷ್ಟೇ ಮುಖ್ಯ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT