ADVERTISEMENT

ವಿಶ್ವದಲ್ಲಿಯೇ ವೀರಶೈವ ಧರ್ಮ ಶ್ರೇಷ್ಠ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:40 IST
Last Updated 6 ಜನವರಿ 2012, 19:40 IST

ಬೆಂಗಳೂರು: `ಸ್ವಾರ್ಥಕ್ಕಾಗಿ ಇತರೆ ವ್ಯಕ್ತಿಗಳ ಜೀವನವನ್ನು ಬಲಿಕೊಡಬಾರದು ಎಂಬ ಸಿದ್ದಾಂತ ದೇಶದಲ್ಲಿ ಅಸ್ತಿತ್ವದಲ್ಲಿದ್ದರೂ, ಪ್ರಸ್ತುತ ರಾಜಕೀಯದಲ್ಲಿ ಇತರರ ಸ್ವಾರ್ಥಕ್ಕೆ ಬಲಿಯಾದ ಸಂದರ್ಭವನ್ನು ಎದುರಿಸಿದ್ದೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ಸ್ಕಂದ- ಗೋತ್ರ ಪುರುಷ~ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

`ಮಾನವ ಧರ್ಮವನ್ನು ಎತ್ತಿ ಹಿಡಿ ಯುವ ವೀರಶೈವ ಧರ್ಮ ಜಗತ್ತಿನಲ್ಲೇ ಶ್ರೇಷ್ಠವಾದುದು. ಇಂತಹ ಸಮಾವೇಶ ದಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಳ್ಳಬೇಕು~ ಎಂದು ಸಲಹೆ ನೀಡಿದರು.

`ವಿಶ್ವಮಾನವ ತತ್ವ ವನ್ನು ಜಗತ್ತಿಗೆ ಸಾರಿದ ವೀರಶೈವಧರ್ಮದ ಗೋತ್ರ ಪುರುಷರ ಕುರಿತು ಸಂಶೋಧನಾ ಕಾರ್ಯ ನಡೆಯಬೇಕಿದೆ~ ಎಂದರು.

ಸಚಿವ ಗೋವಿಂದ ಕಾರಜೋಳ ಮಾತನಾಡಿ, `ಪ್ರಗತಿಪರ ಧೋರಣೆಗಳ ಹೆಸರಿನಲ್ಲಿ ವಿವಿಧ ಸಂಘಟನೆಗಳು ಮಠಮಾನ್ಯಗಳನ್ನು ವಿನಾಕಾರಣ ನಿಂದಿಸುತ್ತಿವೆ. ರಾಜ್ಯದ ಬಹುತೇಕ ಮಠಗಳು ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿರುವ ಅಂಶವನ್ನು ವಿರೋಧಿಸುವವರು ಮರೆಯಬಾರದು. ಬಸವಣ್ಣ ವೀರಶೈವ ಧರ್ಮದಡಿ ಸುಮಾರು 70ಕ್ಕಿಂತ ಹೆಚ್ಚು ಜಾತಿ ಉಪಜಾತಿಗಳಿಗೆ ಆಶ್ರಯ ನೀಡಿದ್ದರು. ಸಮಾನತೆ ಪರಿಕಲ್ಪನೆಯನ್ನು ಒದಗಿಸಿದ ಬಸವಣ್ಣನ ತತ್ವ ಎಂದಿಗೂ ಸಾರ್ವಕಾಲಿಕ~ ಎಂದರು.

ವಾರಣಾಸಿಯ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲದ ಡಾ.ಚನ್ನಸಿದ್ಧರಾಮ ಸ್ವಾಮೀಜಿ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ.ಎಂ.ಶಿವಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.