ಬೆಂಗಳೂರು: ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಲ ಸಾಕ್ಷರತಾ ಪ್ರತಿಷ್ಠಾನ ಮತ್ತು ವಿವಿಧ ಸಂಘಟನೆಯ ಸದಸ್ಯರು ಶನಿವಾರ ನಗರದಲ್ಲಿ ಸೈಕಲ್ ಜಾಥಾ ನಡೆಸಿದರು.
ಸ್ವಾತಂತ್ರ್ಯ ಉದ್ಯಾನದಲ್ಲಿ ಜಾಗೃತಿ ನಡಿಗೆ, ಸೈಕಲ್ ಜಾಥಾಗೆ ಚಾಲನೆ ನೀಡಿದ ಜಲ ಸಾಕ್ಷರತಾ ಪ್ರತಿಷ್ಠಾನದ ಸಂಸ್ಥಾಪಕ ನಿರ್ದೇಶಕ ಅಯ್ಯಪ್ಪ ಮಸಗಿ, ‘ನಗರದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಒಂದು ಸಾವಿರ ಅಡಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಳದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ’ ಎಂದರು.
ನಗರದ ಸುತ್ತಮುತ್ತ 4,700ಕ್ಕೂ ಹೆಚ್ಚು ಕೆರೆಗಳಿವೆ. ಸರಿಯಾದ ನಿರ್ವಹಣೆ ಇಲ್ಲದೆ ಕೆರೆಗಳಲ್ಲಿ ಹೂಳು ತುಂಬಿಕೊಂಡಿವೆ. ಕೆರೆಗಳಲ್ಲಿ ಹೆಚ್ಚು ನೀರನ್ನು ಸಂಗ್ರಹಿಸಲು ಕೆರೆಗಳ ಪುನಶ್ಚೇತನಕ್ಕೆ ಸರ್ಕಾರ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
250ಕ್ಕೂ ಹೆಚ್ಚು ವಿದ್ಯಾರ್ಥಿಗಳು, 25 ಸೈಕಲ್ ಸವಾರರು ಮಾಗಡಿ ರಸ್ತೆ ಟೋಲ್‌ಗೇಟ್ ಬಳಿಯ ಕಾಸಿಯಾ ಭವನಕ್ಕೆ ಜಾಗೃತಿ ಜಾಥಾ ನಡೆಸಿದರು.
ಎಂ.ಎಸ್.ರಾಮಯ್ಯ ಕಾಲೇಜಿನ ಹೋಟೆಲ್ ಮ್ಯಾನೇಜ್‌ಮೆಂಟ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಲಲಿತ್ ಅಶೋಕ್ ಹೋಟೆಲ್ ವತಿಯಿಂದ ವಿಶ್ವ ಜಲ ದಿನದ ಅಂಗವಾಗಿ ‘ಹೋಟೆಲ್ಗಳಲ್ಲಿ ತ್ಯಾಜ್ಯನೀರಿನ ಮರುಬಳಕೆ’ ವಿಷಯ ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಸ್ಯಾಂಸನ್ ಮಾತನಾಡಿ, ಹೋಟೆಲ್ ಉದ್ಯಮಕ್ಕೆ ಹೆಚ್ಚು ನೀರು ಬಳಕೆಯಾಗುತ್ತದೆ. ತ್ಯಾಜ್ಯ ನೀರನ್ನು ಸಂಸ್ಕರಿಸುವ ಮೂಲಕ ಮರುಬಳಕೆ ಮಾಡಬೇಕು. ಆಗ ನೀರಿನ ಕೊರತೆ ತಪ್ಪಿಸಬಹುದು ಎಂದರು.
ಹೋಟೆಲ್‌ನಲ್ಲಿ ತ್ಯಾಜ್ಯ ನೀರಿನ ಸಂಸ್ಕರಣೆಗಾಗಿ ಅಳವಡಿಸಿಕೊಳ್ಳಲಾಗಿರುವ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನಿಡಲಾಯಿತು.
ಬೆಂಗಳೂರು ಜಲಮಂಡಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ಸತ್ಯಮೂರ್ತಿ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳಲ್ಲಿ ನೀರು ಅತಿ ಮುಖ್ಯವಾದುದು. ನೀರನ್ನು ಮಿತವಾಗಿ ಬಳಸುವ ಹಾಗೂ ಪುನರ್ಬಳಕೆ ಮಾಡುವ ಪರಿಪಾಠ ಬೆಳೆಯಬೇಕು ಎಂದು ಹೇಳಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ.ಸುಬ್ರಮಣಿಯನ್ ಮಾತನಾಡಿ, ಅರಣ್ಯ ನಾಶದಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ ಅರಣ್ಯ ನಾಶವನ್ನು ತಡೆಯಬೇಕು ಎಂದರು.
ಜಲಮಂಡಳಿಯ ಅಧ್ಯಕ್ಷ ಎಂ.ಎಸ್.ರವಿಶಂಕರ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.