ADVERTISEMENT

ವೀರಶೈವರು ರಾಜಕೀಯವಾಗಿ ಒಂದಾಗಲು ಕರೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಬೆಂಗಳೂರು: `ಎಲ್ಲ ಪೆಟ್ಟುಗಳನ್ನು ಸಹಿಸಿಕೊಳ್ಳುತ್ತಾ ಬಂದಿರುವ ವೀರಶೈವ ಧರ್ಮದ ಜನರು ರಾಜಕೀಯ ಪ್ರಾಬಲ್ಯಕ್ಕಾಗಿ ಒಗ್ಗಟ್ಟಾಗಬೇಕು~ ಎಂದು ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಕರೆ ನೀಡಿದರು.

ನಗರದಲ್ಲಿ ಭಾನುವಾರ ಪದ್ಮನಾಭ ನಗರ ವೀರಶೈವ ವೇದಿಕೆಯ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, `ರಾಜ್ಯದಲ್ಲಿ ವೀರಶೈವರನ್ನು ರಾಜಕೀಯವಾಗಿ ನಿರ್ನಾಮಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.
 
ರಾಜ್ಯದ ಇತಿಹಾಸದಲ್ಲಿ ಯಾವುದೇ ವೀರಶೈವ ಮುಖ್ಯಮಂತ್ರಿಯನ್ನು ಸರಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ. ಯಡಿಯೂರಪ್ಪ ಅವರ ವಿರುದ್ಧವೂ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಅಧಿಕಾರದಿಂದ ಕೆಳಗಿಳಿಸಲಾಯಿತು. ಹೀಗಾಗಿ ವೀರಶೈವರು ಒಂದಾಗಿ ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ~ ಎಂದರು.

`ವೀರಶೈವ ಎಲ್ಲ ಧರ್ಮಗಳ ಸಾರವನ್ನು ಹೊಂದಿರುವ ಧರ್ಮ. ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಸೀಮಿತವಾಗದೇ ತನ್ನ ಚಿಂತನೆಗಳನ್ನು ವಿಶ್ವ ವ್ಯಾಪಿ ಹರಡಿದ ಧರ್ಮ. ಕರ್ನಾಟಕದಲ್ಲಿ ವೀರಶೈವ ಮಠಗಳು ಶಿಕ್ಷಣ ಹಾಗೂ ಅನ್ನದಾಸೋಹದ ಕಾರ್ಯವನ್ನು ಮಾಡದೇ ಹೋಗಿದ್ದರೆ ರಾಜ್ಯದ ಅಭಿವೃದ್ಧಿ ಬಹಳ ಹಿಂದುಳಿಯುತ್ತಿತ್ತು.
 
ಆದರೆ ಇಂದು ಅದೇ ಮಠಗಳಲ್ಲಿ ಕಲಿತವರು ಆ ಮಠಗಳ ವಿರುದ್ಧವೇ ದೂರುವಂತಹ ಪರಿಸ್ಥಿತಿ ಎದುರಾಗಿದೆ. ವೀರಶೈವ ಧರ್ಮದ ಆದರ್ಶಗಳಾದ ಅನುಕಂಪ, ಪ್ರೀತಿ, ವಿಶ್ವ ಪ್ರೇಮದ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು~ ಎಂದು ಅವರು ಸಲಹೆ ಮಾಡಿದರು.

ಸಮಾರಂಭದಲ್ಲಿ ವೇದಿಕೆ ಹೊರ ತಂದಿರುವ 2012ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಕನಕಪುರ ದೇಗುಲ ಮಠದ ಮುಮ್ಮಡಿ ಮಹಾಲಿಂಗ ಸ್ವಾಮೀಜಿ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ (ಗುಪ್ತವಾರ್ತೆ ಮತ್ತು ಸಮನ್ವಯ) ಡಾ.ಎಚ್.ಎಂ.ವಿರೂಪಾಕ್ಷಯ್ಯ, ವೇದಿಕೆಯ ಅಧ್ಯಕ್ಷ ಎಸ್.ಶಿವದೇವ, ಪ್ರಧಾನ ಕಾರ್ಯದರ್ಶಿ ಶಿವನಂಜಪ್ಪ ಮತ್ತಿತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.