ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಶಿಕ್ಷಣ ಕೋರ್ಸ್‌ಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಖಾಸಗಿ ಕಾಲೇಜುಗಳು ವಿಧಿಸಿರುವ ಷರತ್ತುಗಳಿಗೆ ಸರ್ಕಾರ ಮಣಿದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಸಕ್ತ ಸಾಲಿನ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಗೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಂಗಳವಾರ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಒಪ್ಪಂದದಲ್ಲಿ ಇರಬೇಕಾದ ಅಂಶಗಳ ಬಗ್ಗೆ ಆಡಳಿತ ಮಂಡಳಿಗಳ ಒಕ್ಕೂಟ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಆ ಪ್ರಕಾರವೇ ಒಪ್ಪಂದ ಮಾಡಿಕೊಳ್ಳಲು ಅಧಿಕಾರಿಗಳು ಸಮ್ಮತಿಸಿರಲಿಲ್ಲ. ಅವರ ಷರತ್ತುಗಳಿಗೆ ಒಪ್ಪಿದರೆ ವಾಮಮಾರ್ಗದ ಮೂಲಕ ಸೀಟುಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬುದು ಅಧಿಕಾರಿಗಳ ವಾದವಾಗಿತ್ತು. ಆದರೆ ಪ್ರಸ್ತಾವದಲ್ಲಿನ ಅಂಶಗಳ ಬದಲಾವಣೆಗೆ ಆಡಳಿತ ಮಂಡಳಿಗಳು ಸಿದ್ಧವಿರಲಿಲ್ಲ.
ಕೊನೆಗೆ ಮುಖ್ಯಮಂತ್ರಿಗಳೇ ಮಂಗಳವಾರ ಅಧಿಕಾರಿಗಳ ಸಭೆ ಕರೆದು ವಸ್ತುಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು. ಕಳೆದ ವರ್ಷದ ಮಾದರಿಯಲ್ಲೇ ಒಪ್ಪಂದ ಮಾಡಿಕೊಳ್ಳಿ, ಹೊಸದಾಗಿ ಯಾವುದೇ ಷರತ್ತುಗಳು ವಿಧಿಸುವುದು ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಸರ್ಕಾರ ಮತ್ತು ಆಡಳಿತ ಮಂಡಳಿಗಳ ನಡುವೆ ಒಪ್ಪಂದ ಏರ್ಪಡಲಿದೆ ಎಂದು ಮೂಲಗಳು ತಿಳಿಸಿವೆ.
ಕೌನ್ಸೆಲಿಂಗ್‌ನಲ್ಲಿ ಸೀಟು ಆಯ್ಕೆ ಮಾಡಿಕೊಂಡರೂ ಕಾಲೇಜುಗಳಲ್ಲಿ ಪ್ರವೇಶ ಪಡೆಯದ ಕಾರಣ ಹಾಗೆ ಉಳಿಯುವ ಸೀಟುಗಳು, ವಾಪಸ್ ಆಗುವ ಸೀಟುಗಳು ಹಾಗೂ ಬೇರೆ ಬೇರೆ ಕಾರಣಗಳಿಂದಾಗಿ ತೆರವಾಗುವ ಸೀಟುಗಳನ್ನು ಆಡಳಿತ ಮಂಡಳಿಗೆ ಬಿಟ್ಟು ಕೊಡಬಾರದು. ಅಂತಹ ಸೀಟುಗಳನ್ನು `ಲ್ಯಾಟರಲ್ ಎಂಟ್ರಿ~ ಮೂಲಕ ಎಂಜಿನಿಯರಿಂಗ್‌ನ ಮೂರನೇ ಸೆಮಿಸ್ಟರ್‌ನಲ್ಲಿ ಭರ್ತಿ ಮಾಡಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ಕಾರಕ್ಕೆ ಸಲಹೆ ರೂಪದ ವರದಿ ನೀಡಿತ್ತು.
ಕಳೆದ ವರ್ಷ ವಾಮಮಾರ್ಗದ ಮೂಲಕ ಸರ್ಕಾರಿ ಕೋಟಾದ ಸುಮಾರು 800 ಸೀಟುಗಳು ಆಡಳಿತ ಮಂಡಳಿ ಕೋಟಾಗೆ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಸಲಹೆ ಮಾಡಿತ್ತು. ಆದರೆ ಸರ್ಕಾರ ಈ ಬಾರಿಯೂ ಆಡಳಿತ ಮಂಡಳಿಗಳ ಒತ್ತಡಕ್ಕೆ ಮಣಿಯುವ ಮೂಲಕ ಪ್ರಾಧಿಕಾರದ ವರದಿಯನ್ನು ಮೂಲೆಗುಂಪು ಮಾಡಿದೆ ಎಂದು ಗೊತ್ತಾಗಿದೆ.
ಆ. 25ರಿಂದ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಯನ್ನು (362 ಹುದ್ದೆಗಳ ಭರ್ತಿಗೆ) ಆಗಸ್ಟ್ 25ರಿಂದ ನಡೆಸಲು ನಿರ್ಧರಿಸಿದೆ. ವೇಳಾ ಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ (http://kpsc.nic.in) ಪ್ರಕಟಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.