ADVERTISEMENT

ವೈದ್ಯಕೀಯ ಸೀಟಿಗಾಗಿ ಲಂಚ

ಸಿಬಿಐ: ಜಾಲಪ್ಪ ಸೇರಿ ಐವರ ವಿರುದ್ಧ ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST

ಬೆಂಗಳೂರು: ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಅನುಮತಿ ಪಡೆಯಲು ಭಾರತೀಯ ವೈದ್ಯಕೀಯ ಪರಿಷತ್ತಿನ (ಎಂಸಿಐ) ಪರಿಶೀಲನಾ ತಂಡದ ಸದಸ್ಯರಿಗೆ ಲಂಚ ನೀಡಿದ ಆರೋಪದಲ್ಲಿ ಕೋಲಾರದ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಅಧ್ಯಕ್ಷ ಆರ್.ಎಲ್. ಜಾಲಪ್ಪ ಹಾಗೂ ಇತರ ನಾಲ್ವರ ವಿರುದ್ಧ ಸಿಬಿಐ ಎಫ್.ಐ.ಆರ್ ದಾಖಲಿಸಿದೆ.

ಕಾಲೇಜಿನ ಕಾರ್ಯದರ್ಶಿ ಜಿ.ಎಚ್.ನಾಗರಾಜ್, ಲಂಚ ಪಡೆದ ಆರೋಪದಲ್ಲಿ ಎಂಸಿಐ ತಂಡದ ಸದಸ್ಯರಾದ ಕೇಂದ್ರ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯದ ಉಪ ಮಹಾ ನಿರ್ದೇಶಕ ಎಸ್‌. ಅಜಯ ಕುಮಾರ್, ಕರ್ನೂಲ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಜಿ.ನರೇಂದ್ರನಾಥರೆಡ್ಡಿ, ಮಹಾರಾಷ್ಟ್ರದ ನಾಂದೇಡ್‌ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಎಸ್.ಆರ್. ವಾಕೊಡೆ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.

ಪತ್ತೆಯಾಗಿದ್ದ ನೋಟ್‌ ಪುಸ್ತಕ: ದೇವರಾಜ ಅರಸು ಎಜುಕೇಷನಲ್ ಟ್ರಸ್ಟ್‌ ನಡೆಸುತ್ತಿರುವ ದೇವರಾಜ್ ಅರಸು ವೈದ್ಯಕೀಯ ಕಾಲೇಜಿನ ಅರವಳಿಕೆ ವಿಭಾಗ, ರೋಗ ಲಕ್ಷಣ ಪತ್ತೆ ಮತ್ತು ಚಿಕಿತ್ಸಾ ವಿಭಾಗದ ಸೀಟು ಹೆಚ್ಚಿಸುವಂತೆ ಆಡಳಿತ ಮಂಡಳಿ 2013ರಲ್ಲಿ ಎಂಸಿಐಗೆ ಅರ್ಜಿ ಸಲ್ಲಿಸಿತ್ತು.

ADVERTISEMENT

‘ಮೂಲಸೌಕರ್ಯ ಪರಿಶೀಲನೆಗೆ 29 ಬಾರಿ ಎಂಸಿಐ ತಂಡ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಅವರಿಗೆ ನೀಡಿದ್ದ ಹಣ ಮತ್ತು ಉಡುಗೊರೆಗಳ ಮಾಹಿತಿಯನ್ನು ಕಾಲೇಜಿನ ಅಕೌಂಟೆಂಟ್ ಗೋಲಿ ಶ್ರೀನಿವಾಸ ಎರಡು ನೋಟ್‌ ಪುಸ್ತಕಗಳಲ್ಲಿ ಬರೆದಿಟ್ಟಿದ್ದರು. 2015ರ ಆ. 6ರಂದು ಕಾಲೇಜಿನ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ದೊರೆತ ನೋಟ್‍ ಪುಸ್ತಕಗಳಿಂದ ಲಂಚ ನೀಡಿರುವುದು ಗೊತ್ತಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಸಿಬಿಐ ಉಲ್ಲೇಖಿಸಿದೆ.

‘2013ರ ಮೇ 10ರಂದು ಪರಿಶೀಲನೆಗೆ ಬಂದಿದ್ದ ಎಸ್‌. ಅಜಯಕುಮಾರ್, ನಗರದ ಕ್ಯಾಪಿಟಲ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಕಾಲೇಜಿನ ಹಿಂದಿನ ಪ್ರಾಂಶುಪಾಲ ಸಾಣಿಕೊಪ್ಪ ಜೊತೆ ತೆರಳಿ ಶ್ರೀನಿವಾಸ್ ಅವರೇ ಅಜಯಕುಮಾರ್ ಅವರಿಗೆ ₹ 5 ಲಕ್ಷ ಹಣ ತಲುಪಿಸಿದ್ದರು. ಅದೇ ವರ್ಷ ನ. 20ರಂದು ಕಾಲೇಜಿನ ವ್ಯವಸ್ಥಾಪಕ ಅಶೋಕ್ ನಾರಾಯಣಗೌಡ ಜೊತೆ ಕರ್ನೂಲ್‌ಗೆ ತೆರಳಿ ಜಿ. ನರೇಂದ್ರನಾಥರೆಡ್ಡಿ ಅವರಿಗೆ ₹ 10 ಲಕ್ಷ ತಲುಪಿಸಿದ್ದರು.

ಇದೆಲ್ಲವನ್ನೂ ಐ.ಟಿ ಅಧಿಕಾರಿಗಳ ವಿಚಾರಣೆ ವೇಳೆ ಶ್ರೀನಿವಾಸ್ ಒಪ್ಪಿಕೊಂಡಿದ್ದಾರೆ’ ಎಂದೂ ‌ಸಿಬಿಐ ತಿಳಿಸಿದೆ. ‘ಎಸ್.ಆರ್. ವಾಕೊಡೆ ಅವರನ್ನು ಸಿಕಂದರಬಾದ್ ರೈಲ್ವೆ ನಿಲ್ದಾಣದಲ್ಲಿ ಕಾಲೇಜಿನ ಗುಮಾಸ್ತ ರಾಜಣ್ಣ ಅವರೊಂದಿಗೆ ತೆರಳಿ ಗೋಲಿ ಶ್ರೀನಿವಾಸ್‌ ಭೇಟಿಯಾಗಿದ್ದರು. ನಾಂದೇಡ್‌ಗೆ ಹೊರಟಿದ್ದ ರೈಲಿನಲ್ಲಿದ್ದ ವಾಕೋಡೆ ಅವರಿಗೆ ₹ 10 ಲಕ್ಷ ನೀಡಿ ಮೌಲ್ಯಮಾಪನಾ ವರದಿ ಪಡೆದುಕೊಂಡು ಬಂದಿದ್ದನ್ನೂ ‌ಶ್ರೀನಿವಾಸ್‌ ತಿಳಿಸಿದ್ದಾರೆ’ ಎಂದೂ ಸಿಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.