ADVERTISEMENT

ವೈದ್ಯೆ, ವಿಜ್ಞಾನಿಯಾಗುವ ಕನಸಿಗೆ ನೆರವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 19:07 IST
Last Updated 1 ಜೂನ್ 2017, 19:07 IST
ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿನಿಯರು ದೀಪ ಬೆಳಗಿಸಿದರು. ರಾಷ್ಟ್ರೋತ್ಥಾನ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಿನಯಗೌಡ (ಎಡದಿಂದ), ಡಾ.ಅನುಪಮಾ ಶೆಟ್ಟಿ, ವಿಜ್ಞಾನಿ ಶುಭಾ, ಬೇಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಸ್‌.ನಾಗರಾಜ್‌ ಹಾಗೂ ಉದ್ಯಮಿ ಎಂ.ಪಿ.ಕುಮಾರ್‌ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿನಿಯರು ದೀಪ ಬೆಳಗಿಸಿದರು. ರಾಷ್ಟ್ರೋತ್ಥಾನ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಿನಯಗೌಡ (ಎಡದಿಂದ), ಡಾ.ಅನುಪಮಾ ಶೆಟ್ಟಿ, ವಿಜ್ಞಾನಿ ಶುಭಾ, ಬೇಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಸ್‌.ನಾಗರಾಜ್‌ ಹಾಗೂ ಉದ್ಯಮಿ ಎಂ.ಪಿ.ಕುಮಾರ್‌ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್‌ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಾಧನಾ’ ಯೋಜನೆಗೆ ವೈದ್ಯೆ ಅನುಪಮಾ ಶೆಟ್ಟಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಗ್ರಾಮಗಳಲ್ಲಿ ವೈದ್ಯರ ಕೊರತೆ ಇದೆ. ಆರೋಗ್ಯ ಸೇವೆ ಸರಿಯಾಗಿ ಸಿಗದೆ ಸಾವುಗಳು ಹೆಚ್ಚುತ್ತಿವೆ. ಇಲ್ಲಿ ಸಿಕ್ಕಿರುವ ಶಿಕ್ಷಣದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ವೈದ್ಯರಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡಿ’ ಎಂದು ಸಲಹೆ ನೀಡಿದರು.

ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಎನ್‌.ದಿನೇಶ್‌ ಹೆಗ್ಡೆ, ‘ಗುಣಮಟ್ಟದ ಶಿಕ್ಷಣದೊಂದಿಗೆ ಉಚಿತ ಊಟ, ವಸತಿ ಮತ್ತು ಕಲಿಕಾ ಸಾಮಗ್ರಿ ನೀಡುತ್ತೇವೆ.  ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಸಂಶೋಧನಾ ರಂಗದಲ್ಲಿ ಬೆಳೆಯಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ನಮ್ದು ಹೊಲ ಇಲ್ಲ. ಬ್ಯಾರೊರ ಹೊಲ್ದಾಗ ಅಪ್ಪ–ಅವ್ವ ಕೆಲಸ ಮಾಡ್ತಾರ. ನನ್ಗ ಟೆನ್ತ್‌ನ್ಯಾಗ ಶೇ 89.60 ಮಾರ್ಕ್ಸ್‌ ಬಂದಾವ. ನಮ್‌ ಸಾಲಿ ಶಿಕ್ಷಕರಿಂದ ಪರಿಷತ್‌ ನೀಡುವ ತರಬೇತಿ ಬಗ್ಗೆ ಗೊತ್‌ಮಾಡ್ಕೊಂಡು ಪ್ರವೇಶ ಪರೀಕ್ಷೆ ಪಾಸಾದೆ. ಚೊಲೊತ್ನ್ಯಾಗ ಓದಿ, ಜಿಲ್ಲಾಧಿಕಾರಿ ಆಗುವ ಗುರಿಯಿದೆ’ ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಮಲ್ಲಮ್ಮ ಅನಿಸಿಕೆ ತಿಳಿಸಿದಳು.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಇದ್ದಲಗಿ ಗ್ರಾಮದ ಭಾರತಿ ಯನ್ನು ಮಾತನಾಡಿಸಿದಾಗ, ‘ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿ   ಶೇ 94.24 ಅಂಕ ಗಳಿಸಿದೆ. ಪತ್ರಿಕೆಯಲ್ಲಿನ ಸುದ್ದಿಯೊಂದರಿಂದ  ತರಬೇತಿ ಬಗ್ಗೆ ತಿಳಿದು ಪ್ರವೇಶ ಪರೀಕ್ಷೆ ಬರೆದೆ. ನನಗೆ ಎಂಬಿಬಿಎಸ್‌ ಮಾಡುವ ಗುರಿಯಿದೆ. ಹೋಟೆಲ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತ ನನ್ನನ್ನು ಓದಿಸುತ್ತಿರುವ ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆಯಿದೆ’ ಎಂದಳು.

‘ಇರೊ 3 ಎಕ್ರೆ ಒಣಭೂಮಿಯಿಂದ ಬರುವ ಆಮ್‌ದಾನಿಯಿಂದ ಇಬ್ಬರು ಮಕ್ಕಳನ್ನು ಓದುಸ್ತಾ ಇದ್ದಿನಿ.  ದೊಡ್ಡ ಸಾಲ್ಯಾಗ ಓದ್ಲಾಕ ಮಗಳಿಗೆ ಸೀಟು ಸಿಕ್ಕಿದ್ದರಿಂದ ಖುಷಿಯಾಗಿದೆ. ಅವಳು ಚನ್ನಾಗಿ ಓದಿ ಊರಿಗಿ ಹೆಸರ್‌ ತರ್‌ತಾಳ ಎಂಬ ಭರವಸೆ ಇದೆ’ ಎಂದು ಮಗಳು ಸ್ವಪ್ನಾಳನ್ನು ತರಬೇತಿಗೆ ಬಿಡಲು ಕೊಪ್ಪಳದ ಹ್ಯಾಟಿ ಹಳ್ಳಿಯಿಂದ ಬಂದಿದ್ದ ಸಣ್ಣಹನುಮಪ್ಪ ಹೇಳುತ್ತ ಭಾವುಕರಾದರು.

**

ಏನಿದು ‘ಸಾಧನಾ’?
ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪಿಯುಸಿ ಶಿಕ್ಷಣ, ಸಿಇಟಿ ಮತ್ತು ನೀಟ್‌ ಪರೀಕ್ಷೆ ಎದುರಿಸಲು ಉಚಿತ ತರಬೇತಿ ನೀಡುವ ಯೋಜನೆಗೆ ಪರಿಷತ್‌ ‘ಸಾಧನಾ’ ಎಂದು ಹೆಸರಿಟ್ಟಿದೆ.

ಇದರಲ್ಲಿ ರಾಜ್ಯದ ಗ್ರಾಮಾಂತರ ಪ್ರದೇಶಗಳ, ಆರ್ಥಿಕವಾಗಿ ಹಿಂದುಳಿದ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ 50 ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಲಾಗುತ್ತದೆ. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.