ADVERTISEMENT

ವ್ಯಾಲೆಟ್‌ ಪಾರ್ಕಿಂಗ್‌ ವ್ಯವಸ್ಥೆ: ಶುಲ್ಕ ₹750 ಮಾತ್ರ!

ಪಶ್ಚಿಮ ವಿಭಾಗದ ಡಿಸಿಪಿಯವರಿಂದ ವ್ಯಂಗ್ಯದ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2016, 20:18 IST
Last Updated 4 ಆಗಸ್ಟ್ 2016, 20:18 IST
ವ್ಯಾಲೆಟ್‌ ಪಾರ್ಕಿಂಗ್‌ ವ್ಯವಸ್ಥೆ: ಶುಲ್ಕ ₹750 ಮಾತ್ರ!
ವ್ಯಾಲೆಟ್‌ ಪಾರ್ಕಿಂಗ್‌ ವ್ಯವಸ್ಥೆ: ಶುಲ್ಕ ₹750 ಮಾತ್ರ!   

ಬೆಂಗಳೂರು: ‘ವ್ಯಾಲೆಟ್‌ ಪಾರ್ಕಿಂಗ್‌ ಸೇವೆಗೆ ಸ್ವಾಗತ. ನಿಮ್ಮ ವಾಹನವನ್ನು  ನಗರದ ಯಾವುದೇ ನೋ ಪಾರ್ಕಿಂಗ್‌ ಸ್ಥಳದಲ್ಲಿ ಯಾವಾಗಲಾದರೂ ನಿಲ್ಲಿಸಬಹುದು. ನಾವೇ ನಿಮ್ಮ ವಾಹನದ ಕಾಳಜಿ ಮಾಡುತ್ತೇವೆ’  ಎಂಬ ಸಂಚಾರ ಪೊಲೀಸರ ಸಂದೇಶವೊಂದು ಟ್ವೀಟರ್‌ನಲ್ಲಿ ಸದ್ದು ಮಾಡಿದೆ.

ಸ್ವತಃ ಪಶ್ಚಿಮ ವಿಭಾಗದ ಡಿಸಿಪಿ ಅಭಿಷೇಕ್‌ ಗೋಯಲ್‌ ಅವರೇ ಇಂಥದ್ದೊಂದು ಸಂದೇಶವನ್ನು ತಮ್ಮ ಟ್ವೀಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದು, ಆ ಮೂಲಕ ಸಂಚಾರ ನಿಯಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

‘ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪಾರ್ಕಿಂಗ್‌ ಸಮಸ್ಯೆ ಉದ್ಭವಿಸಿದೆ. ಕೆಲವರು ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಅದು ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ’ ಎಂದು ಗೋಯಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಶ್ಚಿಮ ವಿಭಾಗ ವ್ಯಾಪ್ತಿಯಲ್ಲಿರುವ ವಿವಿಧೆಡೆಯ ನೋ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ್ದಕ್ಕಾಗಿ ಪ್ರತಿದಿನಕ್ಕೆ 100ಕ್ಕೂ ಹೆಚ್ಚು ವಾಹನಗಳ ವಿರುದ್ಧ  ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಜತೆಗೆ ದಂಡ ವಸೂಲಿ ಮಾಡಿ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಸವಾರರು ತಪ್ಪು ತಿದ್ದಿಕೊಳ್ಳುತ್ತಿಲ್ಲ’.

‘ಸದ್ಯ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದಕ್ಕಾಗಿ ಒಂದು ವಾಹನಕ್ಕೆ ಮಾಲೀಕರು ಗರಿಷ್ಠ ₹750ರವರೆಗೆ ದಂಡ ಪಾವತಿ ಮಾಡುತ್ತಿದ್ದಾರೆ. ಕೆಲವರಂತೂ ಅದನ್ನೇ ಹವ್ಯಾಸವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ‘ವ್ಯಾಲೆಟ್‌ ಪಾರ್ಕಿಂಗ್‌ ಸೇವೆ ನೀಡು ತ್ತೇವೆ. ನಿಮ್ಮ ವಾಹನದ ಕಾಳಜಿ ಮಾಡುತ್ತೇವೆ’ ಎಂದು ಟ್ವೀಟ್‌ ಮಾಡಲಾಗಿದೆ. 

ಇದು ಕೆಲವರಿಗೆ ವ್ಯಂಗ್ಯವಾದರೆ, ಇನ್ನು ಕೆಲವರಿಗೆ ಒಳ್ಳೆಯ ಸಂದೇಶ ಎನಿಸಬ ಹುದು. ಸವಾರರು ಜಾಗೃತರಾಗಬೇಕು ಎಂಬುದು ಉದ್ದೇಶ’ ಎಂದರು.

‘ಯಾವುದೇ ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನಗಳು ನಿಂತರೆ, ಆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಹೋಗುತ್ತಿರುವ ಸಿಬ್ಬಂದಿ ಜಪ್ತಿ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.