ADVERTISEMENT

ಶಂಕರರ ವ್ಯಾಖ್ಯಾನ ಅನುವಾದಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST
ಸುರಭಾರತಿ ಸಂಸ್ಕೃತ ಮತ್ತು ಸಂಸ್ಕೃತಿ ಪ್ರತಿಷ್ಠಾನವು ನಗರದಲ್ಲಿ ಆಯೋಜಿಸಿರುವ ‘ಮಾರ್ಗಶೀರ್ಷೋತ್ಸವ’ವನ್ನು ಭಾನುವಾರ ಉದ್ಘಾಟಿಸಿದ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಅವರು ನಿವೃತ್ತ ಐಎಎಸ್‌ ಅಧಿಕಾರಿ ಎ.ರಾಮಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದರು. ಪ್ರತಿಷ್ಠಾನದ ಅಧ್ಯಕ್ಷ ಕೆ.ಎಲ್‌.ಶ್ರೀನಿವಾಸನ್‌ ಮತ್ತು ಶ್ರೀಚರಣ ಕೋ ಆಪರೇಟಿವ್‌ ಬ್ಯಾಂಕ್‌ನ ಅಧ್ಯಕ್ಷ ದ್ವಾರಕಾನಾಥ್‌ ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ವೇದಗಳನ್ನು ಅರ್ಥ­ಮಾಡಿ­ಕೊಳ್ಳಲು ಅಮೂಲ್ಯ­ವಾದ ವ್ಯಾಖ್ಯಾನಗಳನ್ನು ನೀಡಿದವರು ಶಂಕರಾ­ಚಾರ್ಯರು. ಅವರ ವ್ಯಾಖ್ಯಾನ­ಗಳ ಸರಿಯಾದ ಅನುವಾದ ಆಗಬೇಕಿದೆ’ ಎಂದು ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಹೇಳಿದರು.

ಸುರಭಾರತಿ ಸಂಸ್ಕೃತ ಮತ್ತು ಸಂಸ್ಕೃತಿ ಪ್ರತಿಷ್ಠಾನವು ನಗರದಲ್ಲಿ ಆಯೋಜಿಸಿರುವ ‘ಮಾರ್ಗಶೀರ್ಷೋ­ತ್ಸವ’ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂಗ್ಲಿಷ್‌, ಹಿಂದಿ ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೆ ಶಂಕರಾ­ಚಾರ್ಯರ ವ್ಯಾಖ್ಯಾನಗಳು ಅನುವಾದ­ಗೊಂಡಿವೆ. ಆದರೆ, ಈ ಅನುವಾದಗಳು ಮೂಲ ಸಂಸ್ಕೃತ ವ್ಯಾಖ್ಯಾನದ ಸರಿಯಾದ ಅನುವಾದಗಳಲ್ಲ. ಹೀಗಾಗಿ ಸಂಸ್ಕೃತ ವ್ಯಾಖ್ಯಾನದ ಸರಿಯಾದ ಅನುವಾದಕ್ಕೆ ಪ್ರಾಜ್ಞರು ಮುಂದಾಗ­ಬೇಕು’ ಎಂದರು.

‘ವೇದಗಳನ್ನು ಅರ್ಥಮಾಡಿಕೊಳ್ಳದೆ ಭಾರತದ ಸಂಸ್ಕೃತಿಯನ್ನು ಸಂಪೂರ್ಣ­ವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕೃತವು ಭಾರತದ ಆದಿಭಾಷೆ. ಸಂಸ್ಕೃತ ಭಾಷೆಯ ಅವಗಣನೆ­ಯಿಂದಾಗಿ ಅಮೂಲ್ಯವಾದ ಜ್ಞಾನ­ದಿಂದ ಮಕ್ಕಳು ವಂಚಿತರಾಗುವಂತಾ­ಗಿದೆ. ಹೀಗಾಗಿ ಮಕ್ಕಳಿಗೆ ಸಂಸ್ಕೃತ ಕಲಿಸುವುದು ಅಗತ್ಯ’ ಎಂದು ಹೇಳಿದರು.

‘ಮಠಗಳನ್ನು ಕಟ್ಟಿ ಜ್ಞಾನದ ಪ್ರಸಾರಕ್ಕೆ ಕಾರಣರಾದವರು ಶಂಕರಾ­ಚಾರ್ಯರು. ಆದರೆ, ಇಂದು ಕೆಲವು ಮಠಗಳ ಸ್ವಯಂಘೋಷಿತ ಸ್ವಾಮಿಗಳು ವಿವಾದಗಳಲ್ಲಿ ಸಿಲುಕಿದ್ದಾರೆ. ಇದರಿಂದ ಒಳ್ಳೆಯ ಕೆಲಸ ಮಾಡುವ ಮಠಗಳ ಬಗ್ಗೆಯೂ ಅನುಮಾನ ಮೂಡು­ವಂತಾ­ಗಿರು­ವುದು ವಿಪರ್ಯಾಸ’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಕೆ.ಎಲ್‌.­ಶ್ರೀನಿವಾಸನ್‌ ಮಾತನಾಡಿ, ‘ಸಂಸ್ಕೃತ ಭಾಷೆ ಹಾಗೂ ದೇಶದ ಸಂಸ್ಕೃತಿಯ ಪ್ರಸಾರಕ್ಕಾಗಿ ಪ್ರತಿಷ್ಠಾನ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.

ಮಾರ್ಗಶೀರ್ಷೋತ್ಸವದ ಅಂಗ­ವಾಗಿ ಜನವರಿ 15ರವರೆಗೂ ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT