ADVERTISEMENT

ಶತಮಾನದ ಕೆರೆಗೆ ಮೂಲ ಸೌಕರ್ಯಗಳಿಲ್ಲ

ಅವ್ಯವಸ್ಥೆಯ ಆಗರವಾಗಿರುವ ಹೊಸಕೋಟೆಯ 3,211 ಎಕರೆ ವಿಸ್ತೀರ್ಣದ ದೊಡ್ಡ ಅಮಾನಿ ಕೆರೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 19:54 IST
Last Updated 3 ಮೇ 2019, 19:54 IST
ಕೆರೆಯನ್ನು ಆವರಿಸಿಕೊಂಡಿರುವ ಕಳೆ ಗಿಡಗಳನ್ನು ತಿನ್ನುತ್ತಿರುವ ಜಾನುವಾರಗಳು
ಕೆರೆಯನ್ನು ಆವರಿಸಿಕೊಂಡಿರುವ ಕಳೆ ಗಿಡಗಳನ್ನು ತಿನ್ನುತ್ತಿರುವ ಜಾನುವಾರಗಳು   

ಬೆಂಗಳೂರು: ಇದು, ಹೊಸಕೋಟೆಯನ್ನು ಆಳಿದ ಪಾಳೇಗಾರ ತಮ್ಮೇಗೌಡರ ಕಾಲದ ಕೆರೆ. ಒಂದು ಬದಿಯ ದಂಡೆಯಲ್ಲಿ ನಿಂತು ನೋಡಿದರೆ ನೀರು ಕಾಣದಷ್ಟು ಪಾಚಿ, ಕಳೆ ಗಿಡಗಳು ಬೆಳೆದು ನಿಂತಿವೆ. ಅಷ್ಟೇ ಏಕೆ, ಇಲ್ಲಿಗೆ ಹೋಗಬೇಕೆಂದರೆ ದಾರಿಯುದ್ದಕ್ಕೂ ಬಿದ್ದಿರುವ ಬೃಹತ್‌ ಗುಂಡಿಗಳನ್ನು ದಾಟಿಕೊಂಡೇ ಸಾಗಬೇಕು.

ಜೀವ ವೈವಿಧ್ಯದ ತಾಣವಾಗಿರುವ ಹೊಸಕೋಟೆಯ ಅಮಾನಿಕೆರೆಯದುಸ್ಥಿತಿ ಇದು.ಈ ಕೆರೆಯನ್ನು ಹೊಸಕೋಟೆ ದೊಡ್ಡ ಕೆರೆ, ದೊಡ್ಡ ಅಮಾನಿಕೆರೆ ಎಂತಲೂ ಕರೆಯುತ್ತಾರೆ. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ಕೆರೆ ಮೂಲಸೌಕರ್ಯಗಳಿಲ್ಲದೆನಲುಗುತ್ತಿದೆ.

ಇಲ್ಲಿ, ನಿತ್ಯ ಹಲವಾರು ಬಗೆಯ ಪಕ್ಷಿಗಳು ಬರುತ್ತವೆ. ಸಂತಾನೋತ್ಪತ್ತಿಗಾಗಿ ವಿದೇಶಿ ಹಕ್ಕಿಗಳೂ ವಲಸೆ ಬರುತ್ತವೆ. ಆದರೆ, ಕೆರೆಯನ್ನು ಅಭಿವೃದ್ಧಿಪಡಿಸುವ ಕೆಲಸ ಆಗಿಲ್ಲ.ಈ ಬಗ್ಗೆ ಸ್ಥಳೀಯ ಅಧಿಕಾರಿಗಳಾಗಲಿ, ಶಾಸಕರಾಗಲಿ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ADVERTISEMENT

‘ಇಲ್ಲಿ ಕುಡುಕರ ಕಾಟ ಹೆಚ್ಚಾಗಿದೆ.ಕೆರೆಗೆ ಭೇಟಿ ನೀಡುಲು ಬರುವವರ ಮೇಲೆ ಪುಂಡರು ಹಲ್ಲೆ ನಡೆಸಿದ್ದ ಉದಾಹರಣೆಗಳಿವೆ.ಹಾಗಾಗಿ, ಇಲ್ಲಿಗೆ ಬರಲು ಜನ ಹೆದರುತ್ತಾರೆ. ಕೆರೆ ಪ್ರದೇಶದ ಸುತ್ತಮುತ್ತ ಕಟ್ಟಡದ ತ್ಯಾಜ್ಯ ಹಾಗೂ ಕಸ ಸುರಿಯುವ ಪ್ರದೇಶವಾಗಿ ಮಾರ್ಪಟ್ಟಿದೆ.ಸ್ಥಳೀಯ ರಾಜಕಾರಣಿಗಳು ಹಾಗೂ ರೈತರಿಂದ ಒತ್ತುವರಿಯಾಗಿದೆ.ಈ ಬಗ್ಗೆ ನಿಗಾ ಇಡಲು ಇಲ್ಲಿ ಭದ್ರತಾ ಸಿಬ್ಬಂದಿಯೂ ಇಲ್ಲ. ಒಟ್ಟಾರೆ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ’ ಎಂದು ಹೊಸಕೋಟೆ ನಿವಾಸಿ ಮಂಜುನಾಥ್‌ ಹಲಸಹಳ್ಳಿ ದೂರುತ್ತಾರೆ.

‘ಅರಣ್ಯ ಇಲಾಖೆ ಇಲ್ಲಿನ ಮೂರು ಹೆಕ್ಟೇರ್‌ ಪ್ರದೇಶದಲ್ಲಿ 2018–19ರಲ್ಲಿ ನಗರ ಹಸಿರೀಕರಣ ಯೋಜನೆ (ಜಿಯುಎ) ಅಡಿಯಲ್ಲಿ ರಸ್ತೆ ಬದಿ ನೆಡು ತೋಪು (ಆರ್.ಆರ್.ಪಿ.) ನಿರ್ಮಿಸಿದೆ. ಕೆರೆಗೆ ಸಂಪರ್ಕವಿರುವ ರಸ್ತೆಗೆ ಹೋಗುವ ಎಡಭಾಗದಲ್ಲಿ ಅರಣ್ಯ ಇಲಾಖೆಈ ಕುರಿತು‌ ಮಾಹಿತಿ ಫಲಕ ಅಳವಡಿಸಿದೆ. ನಿರ್ವಹಣೆಯ ಕೊರತೆಯಿಂದಾಗಿ ಬಿಸಿಲಿನ ಬೇಗೆಗೆ ಅಲ್ಲಿನ ಬಹುತೇಕ ಗಿಡಗಳುಒಣಗುತ್ತಿವೆ’ ಎಂದು ಅವರು ಹೇಳಿದರು.

ಈ ಕುರಿತು ಮಾತನಾಡಿದ ಹೊಸಕೋಟೆ ಪ್ರಾದೇಶಿಕ ವಲಯ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ವರುಣ್‌ಕುಮಾರ್‌, ‘ಗಿಡಗಳಿಗೆ ನೀರುಣಿಸಲು ಇಲಾಖೆಯ ಸಿಬ್ಬಂದಿಯೊಬ್ಬರನ್ನು ನೇಮಿಸಲಾಗಿದೆ. ಅಲ್ಲದೇ, ಹಗಲು ಮತ್ತು ರಾತ್ರಿ ವೇಳೆ ಗಸ್ತು ತಿರುಗುತ್ತಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಅಂತರ್ಜಲ ವೃದ್ಧಿಯಿಂದ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ವತಿಯಿಂದ ₹2.93 ಕೋಟಿ ವೆಚ್ಚದಲ್ಲಿ ‘ಎಲೆ ಮಲ್ಲಪ್ಪ ಶೆಟ್ಟಿ ಕೆರೆ’ಯಿಂದ ಏತ ನೀರಾವರಿ ಯೋಜನೆ ಮೂಲಕ ಹೊಸಕೋಟೆಯದೊಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವ ಸಿ.ಎಸ್‌.ಪುಟ್ಟರಾಜು ಅಧಿವೇಶನದಲ್ಲಿ ಕಳೆದ ವರ್ಷ ತಿಳಿಸಿದ್ದರು.

‘ಕೆ.ಆರ್.ಪುರ ಕ್ಷೇತ್ರದ ಮೇಡಹಳ್ಳಿಯ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಸಮೀಪದಲ್ಲಿ 15 ದಶ ಲಕ್ಷ ಲೀಟರ್ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ಇದೆ. ಆದರೂ ಕೆರೆಗೆ ಕಲುಷಿತ ನೀರು ಸೇರುತ್ತಿದೆ’ ಎಂದು ವನ್ಯಜೀವಿಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಸ್ವರೂಪ್‌ ದೂರಿದರು.

‘ಸ್ಥಳೀಯ ಮೀನುಗಾರಿಕೆ ವಿಭಾಗದಿಂದ ಟೆಂಡರ್‌ ಪಡೆದಿರುವ ಮೀನುಗಾರರು ಇಲ್ಲಿ ಮೀನುಗಾರಿಕೆ ನಡೆಸಿ, ಕೆರೆ ಬಳಿಯೇ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಕಲುಷಿತ ನೀರಿನಲ್ಲಿಯೇ ಬೆಳೆದ ಮೀನುಗಳನ್ನು ತಿನ್ನುವವರಿಗೆ ಕಾಯಿಲೆಗಳು ಬಂದ ಉದಾಹರಣೆಗಳಿವೆ’ ಎಂದು ಸ್ಥಳೀಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.