ADVERTISEMENT

ಶತಮಾನದ ಶುಕ್ರ ಸಂಕ್ರಮ; ಮುನ್ನೆಚ್ಚರಿಕೆ ಅಗತ್ಯ:ನೇರ ವೀಕ್ಷಣೆಯಿಂದ ದೃಷ್ಟಿ ಹಾನಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 19:30 IST
Last Updated 3 ಜೂನ್ 2012, 19:30 IST

ಬೆಂಗಳೂರು: ಖಗೋಳದಲ್ಲಿ ನಡೆಯುವ ಅಪರೂಪದ ನೈಸರ್ಗಿಕ ಘಟನೆ ಶುಕ್ರ ಸಂಕ್ರಮಕ್ಕೆ ಇದೇ ಆರರಂದು ಆಕಾಶವು ವೇದಿಕೆಯಾಗಲಿದೆ. ಬುಧವಾರ ನಡೆಯಲಿರುವ ಈ ವಿಶೇಷ ಘಟನೆಯನ್ನು ವೀಕ್ಷಿಸಲು ಮುಂಜಾಗ್ರತೆ ಅನಿವಾರ್ಯ. ಇಲ್ಲವಾದರೆ ಶುಕ್ರ ಸಂಕ್ರಮದ ವೀಕ್ಷಣೆಯೇ ಕಣ್ಣುಗಳಿಗೆ ಅಂತಿಮ ನೋಟವಾಗುವ ಸಾಧ್ಯತೆ ಹೆಚ್ಚು ಎಂಬುದು ಖಗೋಳ ತಜ್ಞರ ಅಭಿಪ್ರಾಯ.

ಸೂರ್ಯ ಮತ್ತು ಭೂಮಿಯ ನಡುವೆ ಶುಕ್ರ ಗ್ರಹವು ಹಾದು ಹೋಗುವ ಘಟನೆಯನ್ನು ಶುಕ್ರ ಸಂಕ್ರಮ ಎಂದು ಕರೆಯಲಾಗಿದೆ. 120 ವರ್ಷಗಳಿಗೊಮ್ಮೆ ನಡೆಯುವ ಈ ಅಪರೂಪದ ಘಟನೆಯಿಂದ ಈ ಬಾರಿ ವಂಚಿತರಾದರೆ ಜೀವಿತಾವಧಿಯಲ್ಲಿ ಇನ್ನೆಂದೂ ಶುಕ್ರ ಸಂಕ್ರಮವನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ ಮುಂದಿನ ಶುಕ್ರ ಸಂಕ್ರಮ ಜರುಗಲಿರುವುದು 2117ಕ್ಕೆ.

ಆಗ ನಡೆಯುವ ಶುಕ್ರ ಸಂಕ್ರಮದ ಹೊತ್ತಿಗೆ ಈಗ ಬದುಕುತ್ತಿರುವ ಜನರ ಮೂರನೇ ತಲೆಮಾರು ಭೂಮಿಯ ಮೇಲಿರಲಿದೆ. ಆದ್ದರಿಂದ ನೋಡಲೇಬೇಕಾದ ಈ ವಿಶೇಷ ಘಟನೆಯನ್ನು ಎಚ್ಚರಿಕೆಯಿಂದ ವೀಕ್ಷಿಸಬೇಕು ಎಂಬುದು ಖಗೋಳ ತಜ್ಞರ ಎಚ್ಚರಿಕೆಯ ಮಾತು.

`ಬುಧವಾರ ಬೆಳಗಿನ ಜಾವ 3.40 ಕ್ಕೆ ಆರಂಭಗೊಳ್ಳುವ ಶುಕ್ರ ಸಂಕ್ರಮ ಬೆಳಿಗ್ಗೆ 10.20 ರ ವೇಳೆಗೆ ಕೊನೆಗೊಳ್ಳಲಿದೆ. ಸೂರ್ಯ ಉದಯವಾಗುವ ಸಮಯದಲ್ಲಿ ಕೆಂಪಾಗಿರುವ ಸೂರ್ಯನ ಮುಂದೆ ಶುಕ್ರ ಗ್ರಹ ಹಾದು ಹೋಗುವುದನ್ನು ಬರಿಗಣ್ಣಿಂದ ವೀಕ್ಷಿಸಬಹುದು. ಆದರೆ ಸೂರ್ಯನ ಕಿರಣಗಳ ತೀವ್ರತೆ ಹೆಚ್ಚುತ್ತಾ ಹೋದಂತೆ ಘಟನೆಯನ್ನು ಬರಿಗಣ್ಣಿಂದ ನೊಡುವುದು ಅಪಾಯಕಾರಿ~ ಎಂದು  ಜವಾಹರ್‌ಲಾಲ್ ನೆಹರೂ ತಾರಾಲಯದ ನಿರ್ದೇಶಕಿ ಡಾ.ಬಿ.ಎಸ್.ಶೈಲಜಾ ಅಭಿಪ್ರಾಯಪಟ್ಟರು.

`ಘಟನೆಯಿಂದ ಕಣ್ಣಿಗೆ ಆಗುವ ಹಾನಿಯ ಬಗ್ಗೆ ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ತಿಳಿವಳಿಕೆ ನೀಡಬೇಕಾದ್ದು ಅಗತ್ಯ. ಇದಕ್ಕಾಗಿ ಶಿಕ್ಷಕರು ಹಾಗೂ ಪೋಷಕರಿಗೆ ಘಟನೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಹಾಗೂ ವಿಶೇಷ ಪ್ರದರ್ಶನಗಳನ್ನು ತಾರಾಲಯದ ವತಿಯಿಂದ ಏರ್ಪಡಿಸಲಾಗಿತ್ತು~ ಎಂದು ಅವರು ತಿಳಿಸಿದರು.

`ಬರಿಗಣ್ಣಿಂದ ಶುಕ್ರ ಸಂಕ್ರಮವನ್ನು ವೀಕ್ಷಿಸುವುದು ಅಪಾಯಕಾರಿ. ಸೂರ್ಯಗ್ರಹಣದ ಸಂದರ್ಭದಲ್ಲಿ ವಹಿಸುವ ಮುನ್ನೆಚ್ಚರಿಕೆಯನ್ನೇ ಈ ಸಂದರ್ಭದಲ್ಲೂ ವಹಿಸಬೇಕಾಗುತ್ತದೆ. ಶುಕ್ರ ಸಂಕ್ರಮವನ್ನು ನೇರವಾಗಿ ಬರಿಗಣ್ಣಿಂದ ನೋಡುವುದರಿಂದ ಕಣ್ಣಿನ ರೆಟಿನಾದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಶುಕ್ರ ಸಂಕ್ರಮದ ವೀಕ್ಷಣೆಯಿಂದ ಕಣ್ಣಿನ ಪೊರೆ ಬೇಗ ಏಳುವ ಸಾಧ್ಯತೆಗಳೂ ಹೆಚ್ಚು~ ಎಂದು ನೇತ್ರ ತಜ್ಞ ಡಾ.ಜಿ.ಕೆ.ವೆಂಕಟೇಶ್ ಅವರು `ಪ್ರಜಾವಾಣಿ~ಗೆ ತಿಳಿಸಿದರು.

`ನದಿ ತೀರದಲ್ಲಿ ಸೂರ್ಯ ಕಿರಣಗಳ ಪ್ರತಿಫಲನ ತೀಕ್ಷ್ಣವಾಗಿರುತ್ತದೆ. ಹೀಗಾಗಿ ನದಿ ತೀರದ ಜನರು ಅಂದು ಸೂರ್ಯನನ್ನು ಬರಿಗಣ್ಣಿಂದ ನೋಡುವುದು ಅತಿ ಅಪಾಯಕಾರಿ. ಶುಕ್ರ ಸಂಕ್ರಮವನ್ನು ನೇರವಾಗಿ ನೋಡಿ ತೊಂದರೆ ಅನುಭವಿಸುವ ಬದಲು ವಿಶೇಷ ಕನ್ನಡಕ (ಸನ್ ಫಿಲ್ಟರ್) ಗಳ ಮೂಲಕ ವೀಕ್ಷಿಸುವುದು ಒಳ್ಳೆಯದು~ ಎಂಬುದು ಅವರ ಸಲಹೆ.

`ಈ ಹಿಂದೆ 2004 ರಲ್ಲಿ ಶುಕ್ರ ಸಂಕ್ರಮ ನಡೆದಿತ್ತು. ಈ ಬಾರಿ ಘಟಿಸಲಿರುವ ಶುಕ್ರ ಸಂಕ್ರಮವನ್ನು ವೀಕ್ಷಿಸಲು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ವಿಶೇಷ ಕನ್ನಡಕ (ಸನ್ ಫಿಲ್ಟರ್) ಗಳನ್ನು ಮಾರುವ ವ್ಯವಸ್ಥೆಯನ್ನು ಮಾಡಲಾಗಿದೆ. ಒಂದು ಕನ್ನಡಕಕ್ಕೆ ಹತ್ತರಿಂದ ಹದಿನೈದು ರೂಪಾಯಿ ದರವಿದೆ. ಇದರ ಮೂಲಕ ಕಣ್ಣಿಗೆ ಹಾನಿಯಾಗದಂತೆ ಶುಕ್ರ ಸಂಕ್ರಮವನ್ನು ವೀಕ್ಷಿಸಬಹುದು~ ಎನ್ನುತ್ತಾರೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಈ.ಬಸವರಾಜು.

`ಸೂರ್ಯನ ಮುಂದೆ ಶುಕ್ರ ಗ್ರಹವು ಕಪ್ಪು ಚುಕ್ಕೆಯಂತೆ ಹಾದುಹೋಗುವ ಈ ಅಪರೂಪದ ದೃಶ್ಯವನ್ನು ಸುರಕ್ಷಿತವಾಗಿ ವೀಕ್ಷಿಸಲು ವಿಶೇಷ ಕನ್ನಡಕ (ಸನ್ ಫಿಲ್ಟರ್) ಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳ ಜನರಿಗೆ ಅನುಕೂಲವಾಗಲು ಗುಲ್ಬರ್ಗ, ಬಿಜಾಪುರ, ಬಳ್ಳಾರಿ, ಧಾರವಾಡ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಮೈಸೂರು ಮತ್ತು ತುಮಕೂರುಗಳಲ್ಲಿ ಸಂಸ್ಥೆಯ ವತಿಯಿಂದ ವಿಶೇಷ ಕನ್ನಡಕ (ಸನ್ ಫಿಲ್ಟರ್) ಹಾಗೂ ಕಿರು ಪುಸ್ತಕಗಳ ಮಾರಾಟವನ್ನು ಆಯೋಜಿಸಲಾಗಿದೆ~ ಎಂದು ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿಯ ರಾಜ್ಯ ಸಂಚಾಲಕ ಜಿ.ಸತೀಶ್ ಕುಮಾರ್ ಹೇಳಿದ್ದಾರೆ.

`25 ರಿಂದ 35 ರೂಪಾಯಿಗಳ ಕೈಗೆಟುಕುವ ದರದಲ್ಲಿ ವಿಶೇಷ ಕನ್ನಡಕ (ಸನ್ ಫಿಲ್ಟರ್) ಹಾಗೂ ಮಾಹಿತಿ ಪುಸ್ತಕಗಳು ದೊರೆಯಲಿವೆ. ವಿಶೇಷ ಕನ್ನಡಕಗಳ ಮೂಲಕ ಎಲ್ಲರೂ ಈ ಅಪರೂಪದ ಶುಕ್ರ ಸಂಕ್ರಮವನ್ನು ತಪ್ಪದೇ ವೀಕ್ಷಿಸಬೇಕು~ ಎಂದು ಅವರು ತಿಳಿಸಿದರು.

ವಿಶೇಷ ಕನ್ನಡಕ (ಸನ್ ಫಿಲ್ಟರ್) ಹಾಗೂ ಕಿರುಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 94489 57666 / 99862 21889 (ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ), 99452 25015 (ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.