ADVERTISEMENT

ಶಶಿ ಡಿಸ್ಟಲರಿ ಕಂಪನಿ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:30 IST
Last Updated 10 ಏಪ್ರಿಲ್ 2018, 19:30 IST
ಶಶಿ ಡಿಸ್ಟಲರಿ ಕಂಪನಿ ಅರ್ಜಿ ವಜಾ
ಶಶಿ ಡಿಸ್ಟಲರಿ ಕಂಪನಿ ಅರ್ಜಿ ವಜಾ   

ಬೆಂಗಳೂರು: ‘ಬೆಳ್ಳಂದೂರು ಕೆರೆಯನ್ನು ಮಲಿನಗೊಳಿಸಿರುವ ಕೈಗಾರಿಕೆಗಳನ್ನು ಮುಚ್ಚಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ನಗರದ ಹುಳಿಮಾವಿನ ಶಶಿ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಏತನ್ಮಧ್ಯೆ 2017 ಜೂನ್‌ 16ರಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಎನ್‌ಜಿಟಿ ಮುಂದಿರುವ ಬೆಳ್ಳಂದೂರು ಕೆರೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಗೆ ತಡೆ ನೀಡಿತ್ತು.

ಈ ತಡೆ ಆದೇಶ ಪ್ರಶ್ನಿಸಿ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ (ಎನ್‌ಬಿಎಫ್) ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು 2017ರ ಆಗಸ್ಟ್‌ 8ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.

ADVERTISEMENT

ಶಶಿ ಡಿಸ್ಟಲರಿ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ (ಏ.10) ವಿಚಾರಣೆ ನಡೆಸಿತು. ಈ ವೇಳೆ ಎನ್‌ಬಿಎಫ್‌ ವಕೀಲರು ಸುಪ್ರೀಂ ಕೋರ್ಟ್‌ ಆದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ನೀಡಿದರು.

ಇದನ್ನು ಮಾನ್ಯ ಮಾಡಿದ ಪೀಠ, ‘ಕಂಪನಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಅರ್ಹವಾಗಿಲ್ಲ ಎಂಬುದು ಮೇಲ್ನೋಟಕ್ಕೇ ಕಂಡು ಬರುತ್ತದೆ’ ಎಂದು ಆದೇಶಿಸಿತು.

ಮಂತ್ರಿ ಟೆಕ್‌ಝೋನ್‌ ಅರ್ಜಿ ವಜಾ: ಬೆಳ್ಳಂದೂರು ಕೆರೆ ಅಚ್ಚುಕಟ್ಟು ಪ್ರದೇಶದ 5 ಎಕರೆ 3 ಗುಂಟೆ ಪ್ರದೇಶದಲ್ಲಿ ಮಂತ್ರಿ ಟೆಕ್‌ಝೋನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಯೋಜನೆಗೆ ನೀಡಲಾಗಿದ್ದ ಪರಿಸರ ಅನುಮತಿ ರದ್ದುಪಡಿಸಿದ ‘ರಾಜ್ಯ ಪರಿಸರ ಫಲಶ್ರುತಿ ಅಂದಾಜು ಪ್ರಾಧಿ
ಕಾರ’ದ (ಎಸ್‌ಇಐಎಎ) ಆದೇಶ ಪ್ರಶ್ನಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಎಸ್‌ಇಐಎಎ, 2017ರ ಫೆಬ್ರುವರಿ 23ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ ಅರ್ಜಿಯನ್ನು ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ ವಜಾಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.