ADVERTISEMENT

ಶಾಲಾ ಆವರಣದಲ್ಲೇ ಕೊಳಚೆ ನೀರು

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ವೈಟ್‌ಫೀಲ್ಡ್: ಮಹದೇವಪುರ ಕ್ಷೇತ್ರದ ಕೊಡತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ಶಾಲೆಯ ಮುಂಭಾಗದಲ್ಲೇ ಕೊಳಚೆ ನೀರು ನಿಂತಿದೆ. ಶಾಲಾ ವಿದ್ಯಾರ್ಥಿಗಳಿಗೆ ಕಾಯಿಲೆ ಹರಡುವ ಭೀತಿ ಉಂಟಾಗಿದೆ.

ಬೇಸಿಗೆ ರಜೆ ಪೂರ್ಣಗೊಂಡು ಈಗಾಗಲೇ ಶಾಲೆ ಆರಂಭವಾಗಿದೆ. ಕೊಳಚೆ ನೀರು ಆಸುಪಾಸಿನಲ್ಲಿ ದುರ್ನಾತ ಬೀರುತ್ತಿದೆ.ವಿದ್ಯಾರ್ಥಿಗಳು ಶಾಲೆಗೆ ಮೂಗು ಮುಚ್ಚಿಕೊಂಡೇ ಬರಬೇಕಾದ ಸ್ಥಿತಿ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಪುಟ್ಟ ಗ್ರಾಮ ಮುಳ್ಳೂರಿನಲ್ಲಿ ಸಮರ್ಪಕ ಒಳಚರಂಡಿ ಇಲ್ಲ. ಗ್ರಾಮದ ಮುಖ್ಯ ರಸ್ತೆಯ ಚರಂಡಿಯಿಂದ ರಾಜಕಾಲುವೆಗೆ ಸಂಪರ್ಕ ಕಲ್ಪಿಸಲು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಚರಂಡಿ ಕಾಮಗಾರಿಯನ್ನು ಕೆಲವು ಸಮಯದ ಹಿಂದೆ ಕೈಗೆತ್ತಿಕೊಂಡಿತ್ತು. ಈಗ ಈ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

`ಈ ಕಾಮಗಾರಿ ಸರ್ಕಾರಿ ಶಾಲೆಯ ಮುಂಭಾಗದ ಆವರಣದ ಗೋಡೆ ವರೆಗೆ ಪೂರ್ಣಗೊಂಡಿದೆ. ದೇವರಕೆರೆಯಿಂದ ಬರುವ ನೀರು ಮತ್ತು ಚರಂಡಿ ನೀರು ರಾಜಕಾಲುವೆ ಮೂಲಕ ಗುಂಜೂರು ಗೌರಮ್ಮ ಕೆರೆಗೆ ಹರಿಯಬೇಕಿತ್ತು. ಕೆಲವರು ರಾಜಕಾಲುವೆ ಒತ್ತುವರಿ ಮಾಡಿಕೊಂಡ ಪರಿಣಾಮ ಕೊಳಚೆ ನೀರು ಶಾಲೆಯ ಮುಂಭಾಗದ ಚರಂಡಿಯಲ್ಲೇ ನಿಲ್ಲುತ್ತಿದೆ' ಎಂದು ಸ್ಥಳೀಯರು ದೂರಿದರು.

`ಕಳೆದ ವಾರ ಹಾಗೂ ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಶಾಲಾ ಆವರಣದಲ್ಲೂ ಕೊಳಚೆ ನೀರು ನಿಂತಿದೆ. ಶಾಲಾ ಮೈದಾನ ಕೆಸರುಗದ್ದೆಯಂತಾಗಿದೆ. ವಿದ್ಯಾರ್ಥಿಗಳ ಪ್ರಾರ್ಥನೆ ಹಾಗೂ ಆಟಕ್ಕೂ ತೊಂದರೆ ಆಗಿದೆ. ಸಮಸ್ಯೆ ಬಗ್ಗೆ ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ರಾಜಕಾಲುವೆ ತೆರವುಗೊಳಿಸುವಂತೆ ಒತ್ತಾಯಿಸಲಾಗಿದೆ. ಈವರೆಗೆ ಯಾವುದೇ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿಲ್ಲ' ಎಂದು ಕೊಡತಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.
-ದೊಮ್ಮಸಂದ್ರ ಎಸ್.ಪ್ರಸಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.