ADVERTISEMENT

`ಶಾಲಾ ಮಕ್ಕಳಿಗೆ ಹಾಲು ಅಂತಿಮಗೊಂಡಿಲ್ಲ'

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST

ಬೆಂಗಳೂರು: ಅಂಗನವಾಡಿಯಿಂದ 5ನೇ ತರಗತಿ ಅಥವಾ 7ನೇ ತರಗತಿವರೆಗಿನ ಮಕ್ಕಳಿಗೆ ಹಾಲು ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಯಾವ ತರಗತಿವರೆಗಿನ ಮಕ್ಕಳಿಗೆ ನೀಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ ಎಂದು ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಕೆಎಂಎಫ್‌ಗೆ ಪೂರೈಕೆ ಆಗುವ ಹಾಲಿನ ಪ್ರಮಾಣ ಹೆಚ್ಚಾಗಿದೆ. ಹಾಲನ್ನು ಪೌಡರ್ ಆಗಿ ಪರಿವರ್ತಿಸಲು ಅಧಿಕ ವೆಚ್ಚವಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಮಕ್ಕಳಿಗೆ ಹಾಲು ನೀಡಲು ತೀರ್ಮಾನಿಸಲಾಗಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಿಂಗಳಿಗೆ 54 ಲಕ್ಷ ಲೀಟರ್ ಹಾಲು ಪೂರೈಕೆ ಆಗುತ್ತಿದೆ. ಆದರೆ, ಬಳಕೆ ಆಗುತ್ತಿರುವುದು 34 ಲಕ್ಷ ಲೀಟರ್ ಮಾತ್ರ. ಹೆಚ್ಚುವರಿಯಾಗಿ 20 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ. ಈ ಪೈಕಿ ಹತ್ತು ಲಕ್ಷ ಲೀಟರ್ ಹಾಲನ್ನು ತಮಿಳುನಾಡಿಗೆ ಕಳುಹಿಸುತ್ತಿದ್ದರೆ, ಇನ್ನುಳಿದ ಹತ್ತು ಲಕ್ಷ ಲೀಟರ್ ಹಾಲನ್ನು ಪೌಡರ್ ಆಗಿ ಪರಿವರ್ತಿಸಲಾಗುತ್ತಿದೆ ಎಂದರು.

ಮಕ್ಕಳಿಗೆ ಪೂರೈಸಲು 7ರಿಂದ 8 ಲಕ್ಷ ಲೀಟರ್ ಹಾಲು ಬೇಕಾಗುತ್ತದೆ. ಬೇಡಿಕೆ ಮತ್ತು ಪೂರೈಕೆಯನ್ನು ಆಧರಿಸಿ ಯಾವ ತರಗತಿವರೆಗಿನ ಮಕ್ಕಳಿಗೆ ನೀಡಬೇಕು ಎಂಬುದನ್ನು ನಿರ್ಧರಿಸಲಾಗುವುದು. ಹಾಲು ಪೂರೈಕೆ ಯೋಜನೆಗೆ ಸುಮಾರು 400 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ತಿಳಿಸಿದರು.

ಟೆಟ್ರಾಪ್ಯಾಕ್ ಮೂಲಕ ಹಾಲು ಪೂರೈಸಬೇಕೇ ಅಥವಾ ನೇರವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಖರೀದಿಸಿ ಶಾಲೆಗಳಿಗೆ ಪೂರೈಸಬೇಕೇ ಎಂಬ ಬಗ್ಗೆ ಚರ್ಚೆ ನಡೆದಿದೆ. ಒಂದು ಟೆಟ್ರಾಪ್ಯಾಕ್‌ಗೆ ಎಂಟು ರೂಪಾಯಿ ವೆಚ್ಚವಾಗಲಿದೆ. ಆದ್ದರಿಂದ ಇದರ ಸಾಧಕ -ಬಾಧಕಗಳನ್ನೂ ನೋಡಬೇಕಾಗುತ್ತದೆ ಎಂದರು.

ರಾಜ್ಯದಲ್ಲಿನ ಬಹಳಷ್ಟ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರೋಟೀನ್‌ಯುಕ್ತ ಹಾಲು ನೀಡಲು ಸಾಧ್ಯವೇ ಎಂಬ ಬಗ್ಗೆ ಚರ್ಚೆ ನಡೆದಿದೆ. ಆದರೆ, ಯಾವುದೂ ಅಂತಿಮವಾಗಿಲ್ಲ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.