ADVERTISEMENT

ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲು ಕೋರಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಬೆಂಗಳೂರು: `ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲು ಆಯಾ ರಾಜ್ಯ ಸರ್ಕಾರಗಳ ಒಪ್ಪಿಗೆ ಕೋರಲಾಗಿದೆ~ ಎಂದು ಕಂಚಿ ಕಾಮಕೋಟಿ ಮಠದ ಜಯೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಭಗವದ್ಗೀತಾ ಅಭಿಯಾನ ಕರ್ನಾಟಕ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

 `ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮಾತ್ರ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ನಡೆಯುತ್ತಿದೆ. ಇದಕ್ಕೆ ಆ ಪಕ್ಷದ ಆಡಳಿತವಿರುವ ಇತರೆ ರಾಜ್ಯಗಳು ಕೂಡ ಅನುಮತಿ ನೀಡಬೇಕು~ ಎಂದು ಅವರು ಮನವಿ ಮಾಡಿದರು.
`ಅನೇಕ ಸಮುದಾಯಗಳು ಧಾರ್ಮಿಕ ಶಾಲೆಗಳಲ್ಲಿ ತಮ್ಮ ತಮ್ಮ ಧರ್ಮಗ್ರಂಥಗಳ ಬಗ್ಗೆ ಬೋಧಿಸುತ್ತಿವೆ. ಅದೇ ಮಾದರಿ ಭಗವದ್ಗೀತೆಯನ್ನು ಕೂಡ ಎಲ್ಲ ಶಾಲೆಗಳಲ್ಲಿ ಬೋಧಿಸುವಂತಾಗಬೇಕು~ ಎಂದರು.

ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ವ್ಯಕ್ತಿತ್ವ ವಿಕಸನ, ನೈತಿಕ ಶಿಕ್ಷಣ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಾಮಾಜಿಕ ಸಾಮರಸ್ಯ ಅಂಶಗಳ ಆಧಾರದ ಮೇಲೆ ಅಭಿಯಾನ ಪ್ರಾರಂಭಿಸಲಾಯಿತು. 2007ರಲ್ಲಿ ಆರಂಭಗೊಂಡ ಭಗವದ್ಗೀತಾ ಅಭಿಯಾನವು ನಾಲ್ಕು ವರ್ಷಗಳನ್ನು ಪೂರೈಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಈ ಅಭಿಯಾನ ಕೇವಲ ಹಿಂದೂಗಳಿಗಷ್ಟೇ ಸೀಮಿತವಾಗದೇ ಜಗತ್ತಿನ ಎಲ್ಲಾ ಧರ್ಮಗಳಲ್ಲಿ ಭಗವದ್ಗೀತೆ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ, `ಪರಕೀಯರ ದಾಳಿಗಳು ನಮ್ಮನ್ನು ನಲುಗಿಸಿದರೂ ಪುನಃ ಎದ್ದು ನಿಲ್ಲುವಂತೆ ಮಾಡಿದ್ದು ನಮ್ಮ ಧರ್ಮ, ಪರಂಪರೆ ಮತ್ತು ಸಂಸ್ಕೃತಿ. ಈ ನಿಟ್ಟಿನಲ್ಲಿ ಭಗವದ್ಗೀತೆ ಅಭಿಯಾನವನ್ನು ನಡೆಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ~ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಭಗವದ್ಗೀತಾ ಅಭಿಯಾನದ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಅಂತರ್ಜಾಲ ಹಾಗೂ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿಯವರ `ಗೀತಾಂತರಂಗ~ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ, ಚಿನ್ಮಯ ಮಿಷನ್‌ನ ಬ್ರಹ್ಮಾನಂದಜಿ, ಭಗವದ್ಗೀತಾ ಅಭಿಯಾನ ರಾಜ್ಯ ಸಮಿತಿಯ ಗೌರವಾಧ್ಯಕ್ಷ ನ್ಯಾ.ಡಾ.ಎಂ.ರಾಮಾಜೋಯಿಸ್, ಶಾಸಕರಾದ ಎಂ.ಕೃಷ್ಣಪ್ಪ, ಎಲ್.ಎ.ರವಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.